ಪ್ರಭಾಸ್ 'ಸಲಾರ್​'ಗೆ ಬಾಲಿವುಡ್​ನ ಬೋಲ್ಡ್ ಬ್ಯೂಟಿ ನಾಯಕಿ?

collage (17)
Published on

ಬೆಂಗಳೂರು: ಪ್ರಶಾಂತ್​ ನೀಲ್​ ನಿರ್ದೇಶನದ ಹೊಸ ಸಿನಿಮಾವನ್ನು ಹೊಂಬಾಳೆ ಫಿಲಂಸ್​ ಘೋಷಣೆ ಮಾಡಿದೆ. ಈ ಮೂಲಕ ಸಲಾರ್ ಶೀರ್ಷಿಕೆಯ ಸಿನಿಮಾದಿಂದ ಪ್ರಭಾಸ್​ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಕ್ಕೆ ನಾಯಕರಾಗುತ್ತಿದ್ದಾರೆ. ಸದ್ಯ ಪೋಸ್ಟರ್​ ಮತ್ತು ಶೀರ್ಷಿಕೆಯನ್ನು ಬಿಡುಗಡೆ ಮಾಡಿಕೊಂಡಿರುವ ತಂಡ, ಈ ಚಿತ್ರವನ್ನು ಇಂಡಿಯನ್​ ಸಿನಿಮಾ ಎಂದು ಘೋಷಿಸಿಕೊಂಡಿದೆ. ಹಾಗಾದರೆ ಈ ಬಿಗ್ ಬಜೆಟ್​ನ ಚಿತ್ರಕ್ಕೆ ನಾಯಕಿ ಯಾರಾಗಬಹುದು? ಈ ಪ್ರಶ್ನೆಗೆ ಇದೀಗ ಉತ್ತರವೆಂಬಂತೆ ದಿಶಾ ಪಟಾಣಿ ಹೆಸರು ಹೇಳಿಬರುತ್ತಿದೆ.

ಹೌದು, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್, ಕನ್ನಡದ ಜತೆಗೆ ಭಾರತದ ಹತ್ತಾರು ಭಾಷೆಗಳಲ್ಲಿ ತೆರೆಗೆ ಬರಲಿದೆ. 100 ಕೋಟಿಗೂ ಅಧಿಕ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಎಲ್ಲ ಭಾಷಿಕರಿಗೂ ಈ ಚಿತ್ರದಲ್ಲಿ ನಟಿಸುವ ಅವಕಾಶವನ್ನು ನಿರ್ಮಾಣ ಸಂಸ್ಥೆ ಮಾಡಿಕೊಡುತ್ತಿದೆ. ಅದರಂತೆ ಹೈದರಾಬಾದ್​ನಲ್ಲಿ ಆಡಿಷನ್​ ಕರೆದಿದ್ದು, ಯಾವುದಾದರೂ ಭಾಷೆಯಲ್ಲಿ ಒಂದು ನಿಮಿಷದ ವಿಡಿಯೋ ಮಾಡಿ ವಾಟ್ಸಾಪ್​ ಮೂಲಕ ಕಳುಹಿಸುವಂತೆ ಹೇಳಿದೆ. ಇದೀಗ ನಾಯಕಿ ವಿಚಾರವೂ ಸದ್ದು ಮಾಡುತ್ತಿದೆ.

ಸಿನಿಮಾ ಶೀರ್ಷಿಕೆ ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಸಲಾರ್ ಚಿತ್ರದ ಮೇಲೆ ಎಲ್ಲಿಲ್ಲದ ಕುತೂಹಲ ಗರಿಗೆದರಿತ್ತು. ನಾಯಕಿ ಯಾರಗಬಹುದೆಂಬ ಬಗ್ಗೆ ಚರ್ಚೆಗಳೂ ನಡೆದಿದ್ದವು. ಅದರಂತೆ ಇದೀಗ ಬಾಲಿವುಡ್​ನ ಬೋಲ್ಡ್ ಬ್ಯೂಟಿ ಸಲಾರ್ ಚಿತ್ರಕ್ಕೆ ನಾಯಕಿ ಎಂಬ ಮಾತುಗಳು ಕೇಳಿಬರುತ್ತಿವೆ. ಅಧಿಕೃತ ಘೋಷಣೆ ಆದ ಬಳಿಕವಷ್ಟೇ ನಿಜಾಂಶ ಗೊತ್ತಾಗಲಿದೆ.

ವಿಜಯ್​ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಸ್ಟಾರ್ ಕಲಾವಿದರ ದಂಡೇ ಚಿತ್ರದಲ್ಲಿರಲಿದೆ. ಸದ್ಯ ಪ್ರಭಾಸ್ ಕೈಯಲ್ಲಿ ಪ್ರಸ್ತುತ ಮೂರು ಸಿನಿಮಾಗಳಿವೆ. ಅವುಗಳಲ್ಲಿ ರಾಧೆ ಶ್ಯಾಮ್​ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಅದಾದ ಬಳಿಕ ಸಲಾರ್ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಜತೆಯಲ್ಲಿ ಆದಿಪುರುಷ್ ಮತ್ತು ನಾಗ್​ ಅಶ್ವಿನ್​ ನಿರ್ದೇಶನದ ಸಿನಿಮಾದ ಭಾಗವಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net