ಮುಂದಕ್ಕೆ ಹೋಯ್ತು ಭಾರತದ ಮೊದಲ ಪ್ಯಾನ್​ ವರ್ಲ್ಡ್​ ಚಿತ್ರ

Prabhas - Deepika - Final
Published on

ಮುಂಬೈ: ಭಾರತದ ಮೊದಲ ಪ್ಯಾನ್​ ವರ್ಲ್ಡ್​ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪ್ರಭಾಸ್​-ದೀಪಿಕಾ ಪಡುಕೋಣೆ ಚಿತ್ರವು ಇದೀಗ ಸ್ವಲ್ಪ ಮುಂದಕ್ಕೆ ಹೋಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರವು ಜುಲೈ​ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್​ ಹಿನ್ನೆಲೆಯಲ್ಲಿ ಚಿತ್ರವು ಇದೇ ವರ್ಷ ಅಕ್ಟೋಬರ್​ಗೆ ಪೋಸ್ಟ್​ಪೋನ್​ ಆಗಿದೆ.

ನಾಗ್​ ಅಶ್ವಿನ್​ ಅಭಿನಯದ ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಚಿತ್ರವು ಬರೀ ಭಾರತದ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದಷ್ಟೇ ಅಲ್ಲ, ಇಂಗ್ಲೀಷ್​ನಲ್ಲೂ ಬಿಡುಗಡೆಯಾಗುತ್ತಿದೆ. 400 ಕೋಟಿ ವೆಚ್ಚದ ಈ ಚಿತ್ರವು ಭಾರತದ ಮೊದಲ ಪ್ಯಾನ್​ ವರ್ಲ್ಡ್​ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ಅಶ್ವಿನಿ ದತ್​ ಅವರು ತಮ್ಮ ವೈಜಯಂತಿ ಮೂವೀಸ್​ ಬ್ಯಾನರ್​ನಡಿ ನಿರ್ಮಿಸುತ್ತಿದ್ದಾರೆ.

ಕಳೆದ ವರ್ಷವೇ ಘೋಷಣೆಯಾಗಿದ್ದ ಈ ಚಿತ್ರವು ಜುಲೈನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ, ಕರೊನಾ ಹಾವಳಿ ಹೆಚ್ಚಿರುವುದರಿಂದ ಮತ್ತು ಪ್ರೀ-ಪ್ರೊಡಕ್ಷನ್​ ಕೆಲಸಗಳು ಇನ್ನೂ ಮುಗಿದಿಲ್ಲವಾದ್ದರಿಂದ, ಚಿತ್ರೀಕರಣ ಅಕ್ಟೋಬರ್​ಗೆ ಹೋಗಿದೆ ಎಂದು ಹೇಳಲಾಗಿದೆ.

ಸದ್ಯ, 'ಸಲಾರ್​' ಮತ್ತು 'ಆದಿಪುರುಷ್​' ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರಭಾಸ್​, ಅಕ್ಟೋಬರ್​ ಹೊತ್ತಿಗೆ 'ಸಲಾರ್​' ಚಿತ್ರದ ಚಿತ್ರೀಕರಣ ಮುಗಿಸಿಕೊಳ್ಳಲಿದ್ದಾರಂತೆ. ಇನ್ನು, 'ಆದಿಪುರುಷ್​​' ಚಿತ್ರದ ಬಹುತೇಕ ಚಿತ್ರೀಕರಣ ಅಷ್ಟರಲ್ಲಿ ಮುಗಿಯಲಿದ್ದು, ಅಕ್ಟೋಬರ್​ ನಂತರ ಪ್ರಭಾಸ್​, ಈ ಹೊಸ ಚಿತ್ರದ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು, ದೀಪಿಕಾ ಸಹ ಶಾರೂಖ್​ ಖಾನ್​ ಅಭಿನಯದ 'ಪಠಾಣ್​' ಮತ್ತು ಹೃತಿಕ್​ ರೋಶನ್​ ಅಭಿನಯದ 'ದಿ ಫೈಟರ್​' ಚಿತ್ರದ ಚಿತ್ರೀಕರಣ ಮುಗಿಸಿ, ಈ ಹೊಸ ಚಿತ್ರದಲ್ಲಿ ಪ್ರಭಾಸ್​ಗೆ ಜೋಡಿಯಾಗಲಿದ್ದಾರೆ.

ಈ ಚಿತ್ರದಲ್ಲಿ ಅಮಿತಾಭ್​ ಬಚ್ಚನ್​ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಇನ್ನಷ್ಟೇ ಹೊರಬೀಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net