ಫೈಟರ್ ಜತೆಗೆ ಸಲಾರ್; ಬಾಕ್ಸ್ ಆಫೀಸ್​ನಲ್ಲಿ ಪ್ರಭಾಸ್-ಹೃತಿಕ್

Salaar
Published on

‘ಬಾಹುಬಲಿ’ ಪ್ರಭಾಸ್ ನಟಿಸುತ್ತಿರುವ, ‘ಕೆಜಿಎಫ್’ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಚಿತ್ರ ‘ಸಲಾರ್’. ಹೊಂಬಾಳೆ ಫಿಲಂಸ್ ಲಾಂಛನದಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ವಿುಸುತ್ತಿದ್ದು, ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ. ‘ಕೆಜಿಎಫ್ 2’ ಅದ್ಭುತ ಯಶಸ್ಸಿನ ಬಳಿಕ ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು, ರವಿ ಬಸ್ರೂರು ಈಗ ಪ್ರಭಾಸ್ ಜತೆ ಕೈಜೋಡಿಸಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಇತ್ತೀಚೆಗಷ್ಟೇ ಚಿತ್ರತಂಡ 2023ರ ಸೆಪ್ಟೆಂಬರ್ 28ರಂದು ತೆರೆಗೆ ಬರುವುದಾಗಿ ಘೋಷಿಸಿದೆ.

ಇತ್ತ ‘ಸಲಾರ್’ ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಅತ್ತ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್​ಗೆ ತಲೆಬಿಸಿ ಪ್ರಾರಂಭವಾಗಿದೆ. ಏಕೆಂದರೆ, ಹೃತಿಕ್ ಅಭಿನಯಿಸುತ್ತಿರುವ ‘ಫೈಟರ್’ ಚಿತ್ರವೂ ಅಂದೇ ಬಿಡುಗಡೆ ಆಗಲಿದ್ದು, ದಕ್ಷಿಣ ಚಿತ್ರರಂಗದ ದಿಗ್ಗಜರನ್ನು ಎದುರಿಸಬೇಕಿದೆ. ‘ಸಲಾರ್’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಪ್ರಭಾಸ್​ಗೆ ಶ್ರುತಿ ಹಾಸನ್ ನಾಯಕಿಯಾಗಿದ್ದಾರೆ. ಜಗಪತಿ ಬಾಬು, ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ‘ಫೈಟರ್’ ಚಿತ್ರದಲ್ಲಿ ಹೃತಿಕ್ ರೋಷನ್​ಗೆ ದೀಪಿಕಾ ಪಡುಕೋಣೆ ಜೋಡಿಯಾಗಿದ್ದು, ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 2019ರ ‘ವಾರ್’ ಯಶಸ್ಸಿನ ಬಳಿಕ ಸಿದ್ಧಾರ್ಥ್ ಆನಂದ್ ಜತೆ ಮತ್ತೊಂದು ಆಕ್ಷನ್ ಚಿತ್ರಕ್ಕೆ ಹೃತಿಕ್ ಕೈಜೋಡಿಸಿದ್ದು, ಈಗ ಏಕಾಏಕಿ ‘ಸಲಾರ್’ ಕೂಡ ಅದೇ ದಿನ ಬಿಡುಗಡೆಯಾಗುವುದಾಗಿ ಘೋಷಣೆ ಮಾಡಿರುವುದು, ‘ಫೈಟರ್’ ತಲೆಬಿಸಿ ತಂದೊಡ್ಡಿದೆ ಎನ್ನಲಾಗಿದೆ.

2 ಭಾಗಗಳಲ್ಲಿ ಸಲಾರ್: ಪ್ರಭಾಸ್ ಜತೆ ‘ಸಲಾರ್’ ಚಿತ್ರದ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್, ಜೂ. ಎನ್​ಟಿಆರ್ ಜತೆ ಒಂದು ಸಿನಿಮಾ ಮಾಡಲಿದ್ದಾರೆ ಎಂದು ಘೋಷಿಸಿದ್ದರು. ಆದರೆ, ಅದು ಯಾವಾಗ ಪ್ರಾರಂಭ ಎಂಬುದು ಇದುವರೆಗೆ ಗುಟ್ಟಾಗಿಯೇ ಇತ್ತು. ಸದ್ಯದ ಮಾಹಿತಿ ಪ್ರಕಾರ, ‘ಸಲಾರ್’ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಗಿದಿದೆಯಂತೆ. ಇನ್ನು, ಎರಡನೆಯ ಭಾಗದ ಚಿತ್ರ ಕೆಲ ತಿಂಗಳಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಎಲ್ಲ ಕೆಲಸಗಳನ್ನು ಮುಗಿಸಿ ನಿರ್ದೇಶಕ ಪ್ರಶಾಂತ್ ನೀಲ್ 2023ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜೂ. ಎನ್​ಟಿಆರ್ ಚಿತ್ರ ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net