

ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ರಾಮ್ಗೋಪಾಲ್ ವರ್ಮಾ, 25 ರೂ ಪಾವತಿಸಿದರೆ ಪವರ್ಸ್ಟಾರ್ ಚಿತ್ರದ ಟ್ರೇಲರ್ ತೋರಿಸುವುದಾಗಿ ಹೇಳಿದ್ದರು. 150 ರೂ ಮುಂಗಡ ಬುಕಿಂಗ್ ಮಾಡಿದರೆ ಸಿನಿಮಾ ತೋರಿಸುತ್ತೇನೆ ಎಂದಿದ್ದರು. ಇದೀಗ ಈ ಯೋಜನೆಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.
ಹೌದು, ಆರ್ಜಿವಿ ಹೇಳಿಕೊಂಡ ಪ್ರಕಾರ, ಜು. 22 ರಂದು ಚಿತ್ರದ ಟ್ರೇಲರ್ ಅನ್ನು ಆರ್ಜಿವಿ ವರ್ಲ್ಡ್ ಥಿಯೇಟರ್ನಲ್ಲಿ ಅಪ್ಲೋಡ್ ಮಾಡಬೇಕಿತ್ತು. ಆದರೆ, ಅಲ್ಲಿ ಅಪ್ಲೋಡ್ ಆಗುವುದಕ್ಕೂ ಮುನ್ನವೇ ಚಿತ್ರದ ಟ್ರೇಲರ್ ಲೀಕ್ ಆಗಿತ್ತು. ಹಾಗಾಗಿ ಅನಿವಾರ್ಯವಾಗಿ ಸ್ವತಃ ಆರ್ಜಿವಿ ತಮ್ಮದೇ ಯೂಟ್ಯೂಬ್ನಲ್ಲಿ ಲಿಂಕ್ ಶೇರ್ ಮಾಡಿದ್ದಾರೆ.
ಇತ್ತ ಟ್ರೇಲರ್ ನೋಡುವ ಸಲುವಾಗಿ ಮುಂಚಿತವಾಗಿ ಸಬ್ಸ್ಕ್ರೈಬ್ ಆಗಿದ್ದವರಿಗೆ ಅವರವರ ಹಣವನ್ನು ಮರಳಿಸುವುದಾಗಿಯೂ ಆರ್ಜಿವಿ ಹೇಳಿದ್ದಾರೆ. ಅಂದಹಾಗೆ ಜು.25ಕ್ಕೆ ಈ ಸಿನಿಮಾ ಆರ್ಜಿವಿ ವರ್ಲ್ಡ್ ಥಿಯೇಟರ್ ಆ್ಯಪ್ನಲ್ಲಿ ಬಿಡುಗಡೆ ಆಗಲಿದೆ.
ಆರ್ಜಿವಿ ನಿರ್ದೇಶನ ಮೂಡಿಬಂದಿರುವ ಈ ಟ್ರೇಲರ್ನಲ್ಲಿ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ರಾಜಕೀಯ ಕಥೆಯನ್ನು ಸಿನಿಮಾ ಮಾಡಲಾಗಿದೆ. ಪವನ್ ಕಲ್ಯಾಣ್ ಬದಲಿಗೆ ಪ್ರವನ್ ಕಲ್ಯಾಣ್ ಎಂದು ಹೆಸರನ್ನೂ ಬದಲಿಸಿದ್ದಾರೆ ನಿರ್ದೇಶಕರು.