

ಬೆಂಗಳೂರು: ನಟ-ನಿರ್ದೇಶಕ ವಿಕ್ರಂ ಸೂರಿ ನಿರ್ದೇಶನದ ‘ಚೌಕಾಬಾರ’ ಚಿತ್ರಕ್ಕೀಗ ಪವರ್ ಸಿಕ್ಕಿದೆ. ವಿಕ್ರಮ್ ನಿರ್ದೇಶನದ ‘ಚೌಕಾಬಾರ’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪುನೀತ್ ಚಿತ್ರತಂಡಕ್ಕೆ ಹೊಸ ಶಕ್ತಿ ತುಂಬಿದ್ದಾರೆ. 2017ರಲ್ಲಿ ‘ಎಳೆಯರು ನಾವು ಗೆಳೆಯರು’ ಸಿನಿಮಾ ನಿರ್ದೇಶಿಸಿದ್ದ ವಿಕ್ರಂ, ಇದೀಗ ಕಾದಂಬರಿ ಆಧರಿತ ‘ಚೌಕಾ ಬಾರ’ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸ್ನೇಹ, ಪ್ರೀತಿ, ಸಂಬಂಧ ಹೀಗೆ ಹಲವು ವಿಚಾರಗಳನ್ನು ಹೇಳಲು ಹೊರಟಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ, ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು, ವಿಕ್ರಂ ಸೂರಿ ಪತ್ನಿ ನಮಿತಾ ರಾವ್.
ಹೌದು.. ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸುವುದರ ಜತೆಗೆ ನಿರ್ವಣದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಅವರ ಈ ಮೊದಲ ಪ್ರಾಜೆಕ್ಟ್ಗೆ ಪುನೀತ್ ಕಡೆಯಿಂದ ಅಭಿನಂದನೆ ಸಿಕ್ಕಿದೆ. ‘ನಾನಿನ್ನೂ ಸಿನಿಮಾಕ್ಕೆ ಬಂದಿರಲಿಲ್ಲ. ಆಗಿನಿಂದಲೂ ವಿಕ್ರಂ ಗೊತ್ತು. ಬಾಲನಟನಾಗಿ ಕಾರ್ಯಕ್ರಮವೊಂದನ್ನು ನಿರೂಪಿಸುತ್ತಿದ್ದರು’ ಎಂದು ದಶಕಗಳ ಹಿಂದಿನ ನೆನಪನ್ನು ಪುನೀತ್ ಮೆಲುಕು ಹಾಕಿದರು. ಇನ್ನು ಸಿನಿಮಾ ಬಗ್ಗೆ ಹೇಳುವ ವಿಕ್ರಂ, ‘ಸಿನಿಮಾದಲ್ಲಿನ ಮೂರು ಹಾಡುಗಳನ್ನು ಬೆಂಗಳೂರು, ಕಾರವಾರ, ದಾಂಡೇಲಿ, ಮೈಸೂರು ಸುತ್ತಮುತ್ತ ಚಿತ್ರೀಕರಿಸಿದ್ದೇವೆ. ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್ ಲಕ್ಷ್ಮಣ್ರಾವ್ ಮತ್ತು ನಾನೊಂದು ಹಾಡಿಗೆ ಸಾಹಿತ್ಯ ಬರೆದಿದ್ದೇನೆ. ಮಾರ್ಚ್ಗೆ ಆಡಿಯೋ ಬಿಡುಗಡೆ ಮಾಡಲಿದ್ದೇವೆ’ ಎಂದರು. ಚಿತ್ರದಲ್ಲಿ ವಿಹಾನ್ ಪ್ರಭಂಜನ್, ನಮಿತಾ ರಾವ್, ಕಾವ್ಯಾ ರಮೇಶ್, ಸುಜಯ್ ಗೌಡ, ಸಂಜಯ್ ಸೂರಿ, ಕೀರ್ತಿ ಬಾನು, ಶಶಿಧರ್ ಕೋಟೆ ಸೇರಿ ಹಲವು ಕಲಾವಿದರು ನಟಿಸಿದ್ದಾರೆ.