ಡಿಕೆಡಿ ಸ್ಪರ್ಧಿಗಳ ಜತೆ ಪವರ್​ಸ್ಟಾರ್; ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ..

Cinivani
Published on

ಬೆಂಗಳೂರು: ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ನಲ್ಲಿ ‘ಪವರ್​ಸ್ಟಾರ್’ ಪುನೀತ್​ರಾಜಕುಮಾರ್ ಭಾಗವಹಿಸಿದ್ದಾರೆ. ಅದ್ಭುತ ನೃತ್ಯದ ಮೂಲಕವೇ ಎಲ್ಲರ ಮೆಚ್ಚುಗೆಗೆ ಹೆಸರಾಗಿರುವ ಅಪ್ಪು ಅವರ ಉಪಸ್ಥಿತಿ ಡಿಕೆಡಿಯ ಎಲ್ಲ ನೃತ್ಯಪಟುಗಳ ಉತ್ಸಾಹ ಹೆಚ್ಚಿಸಿದೆ. ಸ್ಪರ್ಧಿಗಳೊಂದಿಗೆ ಪುನೀತ್ ಸ್ವತಃ ಕುಣಿದು ಅವರೊಂದಿಗೆ ತಾವೂ ಒಬ್ಬರಾದರು. ರಂಗಾದ ವೇದಿಕೆ ಪುನೀತ್ ನೃತ್ಯದಿಂದ ಮತ್ತಷ್ಟು ಕಲರ್​ಫುಲ್ ಆಯಿತು. ವಿಶೇಷ ಎಂಬಂತೆ, ‘ಡಿಕೆಡಿ’ಯ ಸ್ಪರ್ಧಿಯಾಗಿರುವ ಮಾತುಬಾರದ ಮತ್ತು ಕಿವಿ ಕೇಳದ ಚೈತ್ರಾಲಿ ಜತೆಗೂ ಪುನೀತ್ ಡಾನ್ಸ್ ಮಾಡಿ ಎಲ್ಲರನ್ನು ರಂಜಿಸಿದರು. ಹನಿಕಾ ಮತ್ತು ಮಿಥುನ್ ಜತೆಗೂ ಹೆಜ್ಜೆ ಹಾಕಿದ್ದಾರೆ. ಇದಷ್ಟೇ ಅಲ್ಲ ತೀರ್ಪಗಾರರಾದ ರಕ್ಷಿತಾ ಪ್ರೇಮ್ ಪುನೀತ್ ಜತೆಗಿನ ಮೊದಲ ಸಿನಿಮಾ ಬಗ್ಗೆ ಹಳೆಯ ನೆನಪುಗಳನ್ನೂ ಹಂಚಿಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಮತ್ತು ಪುನೀತ್ ಮೂನ್ ವಾಕ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸ್ಪರ್ಧಿಗಳೆಲ್ಲರಲ್ಲೂ ಪುನೀತ್ ಉಪಸ್ಥಿತಿ ಸಂಚಲನ ಉಂಟು ಮಾಡಿದೆ. ಈಗಾಗಲೇ ತಮ್ಮ ಪ್ರತಿಭೆಯಿಂದ ಕರ್ನಾಟಕದ ಮನೆಮನೆಯ ವೀಕ್ಷಕರನ್ನು ಸೆಳೆದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸ್ಪರ್ಧಿಗಳಿಗೆ ಉತ್ತೇಜನ ನೀಡಿದ್ದಲ್ಲದೆ, ‘ಇದು ನನ್ನ ಅಚ್ಚುಮೆಚ್ಚಿನ ರಿಯಾಲಿಟಿ ಶೋಗಳಲ್ಲಿ ಒಂದು. ಸಮಯ ಸಿಕ್ಕಾಗಲೆಲ್ಲ ‘ಡಿಕೆಡಿ’ ನೋಡುತ್ತೇನೆ’ ಎಂದು ಪುನೀತ್ ಹೇಳಿದ್ದಾರೆ.

ಸಲಹೆ, ಮಾರ್ಗದರ್ಶನದಿಂದ ನೃತ್ಯಗಾರರಿಗೆ ಸ್ಪೂರ್ತಿ ತುಂಬುವ ನಟ ವಿಜಯ್ ರಾಘವೇಂದ್ರ, ನಟಿ ರಕ್ಷಿತಾ ಪ್ರೇಮ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಪುನೀತ್ ಜತೆ ಕಳೆದ ಅಪರೂಪದ ಕ್ಷಣಗಳನ್ನು ಮೆಲುಕು ಹಾಕಿದರು. ನಿರೂಪಕಿ ಅನುಶ್ರೀ ಎಂದಿನಂತೆ ವಿಶಿಷ್ಟ ಮಾತುಗಾರಿಕೆಯಿಂದಲೇ ಗಮನ ಸೆಳೆದರು. ಈ ವಿಶೇಷ ಸಂಚಿಕೆ ಜೀ ಕನ್ನಡದಲ್ಲಿ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net