

ಬೆಂಗಳೂರು: ‘ಸೆಂಚುರಿ ಸ್ಟಾರ್’ ಶಿವರಾಜ್ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ ‘ದ್ರೋಣ’ದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಅಣ್ಣನ ಚಿತ್ರಕ್ಕೆ ತಮ್ಮನ ಪವರ್ ಕೂಡ ಲಭಿಸಿದೆ. ಅಂದರೆ ಮಾ. 6ಕ್ಕೆ ಬಿಡುಗಡೆ ಆಗಲಿರುವ ‘ದ್ರೋಣ’ ಚಿತ್ರದ ಆಡಿಯೋ ಹಾಗೂ ಟ್ರೇಲರನ್ನು ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಫೆ. 23ರಂದು ಲಾಂಚ್ ಮಾಡಲಿದ್ದಾರೆ.
ಪ್ರಮೋದ್ ಚಕ್ರವರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವ ಜತೆಗೆ ನಿರ್ದೇಶನವನ್ನೂ ಮಾಡಿರುವ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿದ್ದು, ಅವರಿಲ್ಲಿ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಇನಿಯಾ ನಾಯಕಿ ಆಗಿ ಅಭಿನಯಿಸಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲೇ ಬಿಡುಗಡೆ ಆಗುತ್ತದೆ ಎನ್ನಲಾಗಿದ್ದ ಈ ಸಿನಿಮಾ ರಿಲೀಸ್ ದಿನಾಂಕ ನಂತರ ಮುಂದೂಡಲ್ಪಟ್ಟಿತ್ತು. ಹೀಗಾಗಿ ಚಿತ್ರ ಯಾವಾಗ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಅಭಿಮಾನಿಗಳಲ್ಲಿದ್ದ ಕುತೂಹಲ ಮುಂದುವರಿದಿತ್ತು. ಇದೀಗ ತೆರೆ ಕಾಣಲಿರುವ ದಿನಾಂಕ ಘೋಷಣೆ ಆಗಿರುವುದರಿಂದ ಅಭಿಮಾನಿಗಳ ಮೊಗದಲ್ಲಿ ನಗು ಮೂಡಿದೆ.
‘ಡಾಲ್ಪಿನ್ ಮೀಡಿಯಾ ಹೌಸ್’ ಲಾಂಛನದಲ್ಲಿ ಮಹದೇವ್, ಸಂಗಮೇಶ, ಶೇಷು ಚಕ್ರವರ್ತಿ ಜತೆಯಾಗಿ ನಿರ್ವಿುಸಿರುವ ಈ ಸಿನಿಮಾಗೆ ರಾಮ್ ಕ್ರಿಶ್ ಸಂಗೀತ ನೀಡಿದ್ದಾರೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಶಿವರಾಜ್ಕುಮಾರ್, ರವಿಕಿಶನ್ ಹಾಗೂ ರಂಗಾಯಣ ರಘು ಕಾಂಬಿನೇಷನ್ ಈ ಚಿತ್ರ ಹೈಲೈಟ್ ಎನ್ನುತ್ತಿದೆ ಚಿತ್ರತಂಡ.