ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ ...

Nimagondu Sihisuddi - Final
Published on

'ಇಷ್ಟಕಾಮ್ಯ' ಫೇಮ್​ನ ಕಾವ್ಯ ಶೆಟ್ಟಿ, 'ನಿಮಗೊಂದು ಸಿಹಿಸುದ್ದಿ' ಎಂಬ ವೆಬ್​ಸೀರೀಸ್​ನಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದೀರಿ ಎಂಬ ಸುದ್ದಿ ಇತ್ತೀಚೆಗಷ್ಟೇ ಕೇಳಿ ಬಂದಿತ್ತು. ಈಗ ಆ ವೆಬ್​ಸೀರೀಸ್​ಗೆ ಚಾಲನೆ ಸಿಕ್ಕಿದ್ದು, ಇತ್ತೀಚೆಗೆ ಪೋಸ್ಟರ್​ ಬಿಡುಗಡೆಯಾಗಿದೆ.

ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಪ್ರಯೋಗಗಳಾಗಿವೆ. ಈಗ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸಿನ ಕಥೆ ವೆಬ್ ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆದಿದ್ದು, ಅದೇ 'ನಿಮಗೊಂದು ಸಿಹಿಸುದ್ದಿ'ಯ ವಿಶೇಷತೆ.

ಹೆಣ್ಣು ಗರ್ಭಧರಿಸಿದಾಗ 'ಗುಡ್​ ನ್ಯೂಸ್ ಫಾರ್ ಯೂ ...ʼಅಂತ ವೈದ್ಯರು ಹೇಳೋದು ವಾಡಿಕೆ. ಅದೇ ಒಬ್ಬ ಪುರುಷನನ್ನು ಪರೀಕ್ಷೆಗೆ ಒಳಪಡಿಸಿದ ನಂತರ ʻನಿಮಗೊಂದು ಸಿಹಿ ಸುದ್ದಿʼ ಅಂದರೆ, ಎಂಥವರಿಗಾದರೂ ಆಶ್ಚರ್ಯವಾಗುವುದಿಲ್ಲವಾ? ಗಂಡಸು ಗರ್ಭ ಧರಿಸುತ್ತಾನೆ ಅನ್ನೋ ಕಲ್ಪನೆಯೇ ಒಂಥರಾ ವಿಲಕ್ಷಣ ಎನ್ನುವ ವಾತಾವರಣವೇ ಈ ಕ್ಷಣಕ್ಕೂ ಜಗದಗಲ ಚಾಲ್ತಿಯಲ್ಲಿದೆ. ಹೀಗಿರುವಾಗ ಅದನ್ನು ವೆಬ್ ಸರಣಿಯ ಮೂಲಕ ಹೇಳುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಗೋಲ್ಡ್ ಚೈನ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ವೆಬ್​ಸೀರೀಸ್​ ನಿರ್ದೇಶನ ಮಾಡುತ್ತಿರುವವರು ಸುಧೀಂದ್ರ ನಾಡಿಗೇರ್​. ಈ ಹಿಂದೆ ಉಪೇಂದ್ರ ಅವರ 'ಟೋಪಿವಾಲಾ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಅವರು, ಈ ವೆಬ್​ಸರಣಿಯ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯ ಹೊಸ ಪ್ರತಿಭೆ ರಘು ಭಟ್ ಗರ್ಭ ಧರಿಸಿದ ಪುರುಷನ ಪಾತ್ರದಿಂದ ಪರಿಚಯಗೊಳ್ಳುತ್ತಿದ್ದಾರೆ.

ಕಾಫಿ ಡೇ ಈ ಸರಣಿಯ ಬ್ರಾಂಡ್ ಪಾರ್ಟ್ನರ್ ಕೂಡಾ ಆಗಿರುವುದರಿಂದ ಅಲ್ಲಿಯೇ 'ನಿಮಗೊಂದು ಸಿಹಿ ಸುದ್ದಿʼಯ ಪೋಸ್ಟರ್ ಅನ್ನು ಅನಾವರಣ ಮಾಡಲಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದವರೆಲ್ಲರೂ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net