ಪೂಜಾ ಹೆಗ್ಡೆಗೂ ಅದೇ ಸಮಸ್ಯೆ ಆಯ್ತ?

Pooja Final
Published on

ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳ ಅಕೌಂಟ್ ಹ್ಯಾಕ್ ಆಗುವುದು ಹೊಸದೇನಲ್ಲ. ಈಗಾಗಲೇ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ರಿಷಿ ಕಪೂರ್, ಶೃತಿ ಹಾಸನ್, ಶಾಹಿದ್ ಕಪೂರ್, ಕರಣ್ ಜೋಹಾರ್, ಅನುಪಮ್ ಖೇರ್ ಮುಂತಾದ ಹಲವರ ಅಕೌಂಟ್‌ಗಳು ಹ್ಯಾಕ್ ಆಗಿ, ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕೊನೆಗೆ ಹೇಗೋ ತಮ್ಮ ಖಾತೆಗಳನ್ನು ವಾಪಸ್ಸು ಪಡೆದುಕೊಂಡಿದ್ದಾರೆ.

ಈಗ್ಯಾಕೆ ಈ ವಿಷಯ ಎಂದರೆ, ಪೂಜಾ ಹೆಗ್ಡೆಗೂ ಬುಧವಾರ ಅದೇ ಅನುಭವವಾಗಿದೆ. ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದೆ ಎಂದು ಸ್ವತಃ ಪೂಜಾ ಹೇಳಿಕೊಂಡಿದ್ದರು. ಸಾಕಷ್ಟು ಪರಿಶ್ರಮದ ನಂತರ, ತಮ್ಮ ಅಕೌಂಟ್ ಮರಳಿ ಪಡೆದಿದ್ದಾರೆ.

ಬುಧವಾರ, ಪೂಜಾ ಅವರ ಇನ್‌ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿತ್ತಂತೆ. ಇದು ಮೊದಲು ಪೂಜಾ ಗಮನಕ್ಕೆ ಬಂದಿರಲಿಲ್ಲ. ಅದನ್ನು ಹ್ಯಾಕ್ ಮಾಡಿದವರು, ಒಂದಿಷ್ಟು ತರಲೆ ಮಾಡಿದ್ದಾರೆ. ಸಮಂತಾ ಅಕ್ಕಿನೇನಿ ಫೋಟೋ ಹಾಕಿ, ‘ಐ ಡೋಂಟ್ ಫೈಂಡ್ ಹರ್ ಪ್ರೆಟ್ಟಿ ...’ (ಸಮಂತಾ ಅಷ್ಟು ಸುಂದರಿಯೇನಲ್ಲ ಅಂತ ನನ್ನ ಅನಿಸಿಕೆ) ಎಂದು ಸಂದೇಶ ಹಾಕಿದ್ದಾರೆ. ಯಾವಾಗ ಇಂಥದ್ದೊಂದು ಕಾಲೆಳೆಯುವ ಸಂದೇಶ ತಮ್ಮ ಅಕೌಂಟ್​ನಲ್ಲಿ ಕಾಣಿಸಿಕೊಂಡಿತೋ, ಆಗ ಅಕೌಂಟ್​ ಹ್ಯಾಕ್​ ಆಗಿದೆ ಎಂದು ಪೂಜಾಗೆ ಸ್ಪಷ್ಟವಾಗಿದೆ. ತಕ್ಷಣವೇ ಅದನ್ನು ತಮ್ಮ ತಾಂತ್ರಿಕ ತಂಡದ ಗಮನಕ್ಕೆ ತಂದಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪೂಜಾ ಹೆಗ್ಡೆ ಅವರ ಸೋಷಿಯಲ್ ಮೀಡಿಯಾ ತಂಡದವರು, ಎಲ್ಲಿಂದ ಹ್ಯಾಕ್ ಆಗಿದೆ ಎಂದು ಹುಡುಕಾಟ ನಡೆಸಿದ್ದಾರೆ. ಕೊನೆಗೆ, ಒಂದಿಷ್ಟು ಸಮಯದ ನಂತರ, ಹ್ಯಾಕರ್‌ಗಳಿಂದ ಅಕೌಂಟ್ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಪೂಜಾ, ‘ಕೊನೆಗೂ ನನ್ನ ಇನ್‌ಸ್ಟಾಗ್ರಾಂ ಅಕೌಂಟ್ ನನಗೆ ವಾಪಸ್ಸು ಸಿಕ್ಕಿದೆ. ಈ ವಿಷಯದಲ್ಲಿ ಸಹಾಯ ಮಾಡಿದ ನನ್ನ ತಾಂತ್ರಿಕ ತಂಡಕ್ಕೆ ಧನ್ಯವಾದಗಳು’ ಎಂದು ಥ್ಯಾಂಕ್ಸ್ ಹೇಳಿದ್ದಾರೆ. ಅಷ್ಟೇ ಅಲ್ಲ, ಹ್ಯಾಕ್ ಆದ ಸಮಯದಲ್ಲಿ, ಅಕೌಂಟ್‌ನಿಂದ ಶೇರ್ ಆದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net