

ಬೆಂಗಳೂರು: ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರವು ಜನವರಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ಕಳೆದ ತಿಂಗಳೇ ನಿರ್ದೇಶಕ ನಂದಕಿಶೋರ್ ಹೇಳಿಕೊಂಡಿದ್ದರು. ಆದರೆ, ಆ ನಂತರ ಏನು ಸುದ್ದಿ ಇಲ್ಲ. ಚಿತ್ರವು ಇದೇ ತಿಂಗಳು ಬಿಡುಗಡೆಯಾಗುತ್ತದೋ ಅಥವಾ ಸ್ವಲ್ಪ ಮುಂದಕ್ಕೆ ಹೋಗಿದೆಯೋ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇದೆ.
ಇದನ್ನೂ ಓದಿ: ‘ಡಾರ್ಲಿಂಗ್’ ಕೃಷ್ಣ ಈಗ ‘ಮಿಸ್ಟರ್ ಬ್ಯಾಚುಲರ್’
ಈ ಮಧ್ಯೆ, ಹೊಸ ವರ್ಷದ ಅಂಗವಾಗಿ ಚಿತ್ರತಂಡದಿಂದ ಎರಡು ಗಿಫ್ಟ್ಗಳು ಸಿಕ್ಕಿದೆ. 'ಪೊಗರು' ಚಿತ್ರವು ತೆಲುಗು ಮತ್ತು ತಮಿಳಿನಲ್ಲಿ ಡಬ್ ಆಗಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತಲ್ಲ? ಈಗ ಆ ಎರಡೂ ಭಾಷೆಗಳ ಡೈಲಾಗ್ ಟ್ರೈಲರ್ ಬಿಡುಗಡೆಯಾಗಿದೆ. ಇದನ್ನು ಸ್ವತಃ ಧ್ರುವ ಅವರೇ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ಗಳ ಮೂಲಕ ಬಿಡುಗಡೆ ಮಾಡಿದ್ದಾರೆ.
ಒಂದು ವರ್ಷದ ಹಿಂದೆ, ಕನ್ನಡದಲ್ಲಿ ಡೈಲಾಗ್ ಟ್ರೈಲರ್ ಬಿಡುಗಡೆಯಾಗಿತ್ತು. ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಸಂಭಾಷಣೆ ಹೇಳುವ ಶೈಲಿಯಿಂದ ಜನಪ್ರಿಯವಾಗಿರುವ ಧ್ರುವ, ಈ ಡೈಲಾಗ್ ಟ್ರೈಲರ್ನಿಂದ ಇನ್ನಷ್ಟು ಸುದ್ದಿ ಮಾಡಿದ್ದರು. ಇದೀಗ ಅದೇ ಟ್ರೈಲರ್ ತೆಲುಗು ಮತ್ತು ತಮಿಳಿನಲ್ಲೂ ಡಬ್ ಆಗಿ ಬಿಡುಗಡೆಯಾಗಿದೆ.
'ಪೊಗರು' ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆಯನ್ನು ರಚಿಸಿದ್ದಾರೆ. ಚಿತ್ರದಲ್ಲಿ ಧ್ರುವ ಜತೆಗೆ ರಶ್ಮಿಕಾ ಮಂದಣ್ಣ, ಚಿಕ್ಕಣ್ಣ, ಧನಂಜಯ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಹಲವು ಜನಪ್ರಿಯ ನಟರು ನಟಿಸಿದ್ದಾರೆ.