ಖರಾಬು 10 ಕೋಟಿ ಜವಾಬು: ಕಾಲೆಳೆದವರಿಗೆ ನಂದಕಿಶೋರ್ ಪ್ರಶ್ನೆ...

Kharabu
Published on

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ‘ಖರಾಬು’ ಹಾಡು ಹೊಸ ದಾಖಲೆ ಮಾಡಿದೆ. ಬಿಡುಗಡೆಯಾದ ಈ ನಾಲ್ಕು ತಿಂಗಳುಗಳಲ್ಲಿ ಈ ಹಾಡಿಗೆ ನೂರು ಮಿಲಿಯನ್ ವ್ಯೂಸ್ ಸಿಕ್ಕಿದೆ. ಅಂದರೆ, 10 ಕೋಟಿ ಬಾರಿ ಈ ಹಾಡು ವೀಕ್ಷಿಸಲ್ಪಟ್ಟಿದೆ.

ಕನ್ನಡದ ಹಾಡೊಂದಕ್ಕೆ ನೂರು ಮಿಲಿಯನ್ ವ್ಯೂಸ್ ಸಿಗುತ್ತಿರುವುದು ಇದು ಎರಡನೇ ಸಲ. ಇದಕ್ಕೂ ಮುನ್ನ ‘ರ್ಯಾಂಬೋ’ ಚಿತ್ರದ ‘ಚುಟುಚುಟು ಅಂತೈತಿ ...’ ಹಾಡು ಇಂಥದ್ದೊಂದು ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ‘ಪೊಗರು’ ಸಹ ಅದೇ ದಾರಿ ಹಿಡಿದಿದೆ. ವ್ಯತ್ಯಾಸವೆಂದರೆ, ಆ ಹಾಡು ಬಿಡುಗಡೆಯಾಗಿ ಒಂದೂವರೆ ವರ್ಷಗಳ ನಂತರ ಇಂಥದ್ದೊಂದು ದಾಖಲೆಗೆ ಪಾತ್ರವಾಗಿತ್ತು. ಆದರೆ, ‘ಪೊಗರು’ ಚಿತ್ರ ಬಿಡುಗಡೆಯಾಗುವುದಕ್ಕೆ ಮುಂಚೆಯೇ ಇಂಥದ್ದೊಂದು ದಾಖಲೆಯಾಗಿದೆ ಎನ್ನುವುದು ವಿಶೇಷ.

ಈ ಕುರಿತು ಮಾತನಾಡುವ ನಿರ್ದೇಶಕ ನಂದಕಿಶೋರ್, ‘ಇದೊಂದು ಪ್ರಾಮಾಣಿಕವಾದ ಪ್ರಯತ್ನ. ಮೊದಲ ಮೂರು ದಿನಗಳ ಕಾಲ, ಕೆಲವರು ನಮಗೆ ಬಹಳ ಕಾಟ ಕೊಟ್ಟರು. ಹಾಡು ಚೆನ್ನಾಗಿಲ್ಲ ಎಂದರು. ದುಡ್ಡು ಖರ್ಚು ಮಾಡುತ್ತಿರುವುದಕ್ಕೆ ಇಷ್ಟು ಹಿಟ್ಸ್ ಸಿಗುತ್ತಿದೆ ಎಂದರು. ಅದನ್ನೆಲ್ಲ ಮೀರಿ ಹಾಡು ಹಿಟ್ ಆಗಿದೆ. ದುಡ್ಡು ಕೊಟ್ಟು ನೂರು ಮಿಲಿಯನ್ ವ್ಯೂಸ್ ಮಾಡೋಕೆ ಸಾಧ್ಯನಾ?’ ಎಂದು ಪ್ರಶ್ನಿಸುತ್ತಾರೆ ನಂದಕಿಶೋರ್. ಹೀಗೆ ಹಾಡು ದಾಖಲೆ ಮಾಡುತ್ತಿರುವಾಗಲೇ, ಶುಕ್ರವಾರ ಇದೇ ಹಾಡಿನ ತೆಲುಗು ಅವತರಣಿಕೆ ಬಿಡುಗಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net