

ಹೈದರಾಬಾದ್: ಟಾಲಿವುಡ್ ( Tollywood ) ಕಿರುತೆರೆ ಲೋಕದಲ್ಲಿ ನಿರೂಪಕಿ ಹಾಗೂ ನಟಿ ರಶ್ಮಿ ಗೌತಮ್ ( Rashmi Gautham ) ಅವರಿಗೆ ಸಖತ್ ಕ್ರೇಜ್ ಇದೆ. ತಮ್ಮ ಸೌಂದರ್ಯ, ನಟನೆ ಮತ್ತು ಆಕರ್ಷಕ ಮಾತುಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಾರೆ. ರಶ್ಮಿ ಅವರು ಜನಪ್ರಿಯ ರಿಯಾಲಿಟಿ ಶೋ ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಜನಪ್ರಿಯ ಆ್ಯಂಕರ್ ಆಗಿ ಖ್ಯಾತಿ ಪಡೆದರು. ಅಲ್ಲದೆ, ಹಲವು ಸಿನಿಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡರು.
ಪ್ರಸ್ತುತ ರಶ್ಮಿ ಗೌತಮ್ ಅವರು ಕಿರುತೆರೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಕಾಲಕಾಲಕ್ಕೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಇದರ ನಡುವೆ ಇತ್ತೀಚೆಗೆ ರಶ್ಮಿ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಶ್ಮಿ ಗೌತಮ್ ಈ ಹಿಂದೆ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ( Casting couch ) ಬಗ್ಗೆ ಮಾತನಾಡಿದ್ದರು. ಸದ್ಯ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಬಂಧನವಾಗಿರುವ ಸುದ್ದಿ ಟಾಲಿವುಡ್ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದೇ ಸಂದರ್ಭದಲ್ಲಿ ರಶ್ಮಿ ಅವರ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ರಶ್ಮಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಇತ್ತೀಚೆಗಷ್ಟೇ ಹಂಚಿಕೊಂಡು ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
2020ರಲ್ಲಿ ಮಾತನಾಡಿರುವ ವಿಡಿಯೋ ಇದಾಗಿದ್ದು, ದಯವಿಟ್ಟು ಆ ವೀಡಿಯೊವನ್ನು ಈಗ ಬಳಸಬೇಡಿ ಎಂದು ರಶ್ಮಿ ಕೇಳಿಕೊಂಡಿದ್ದಾರೆ. ಅಪ್ರಾಪ್ತರ ಮೇಲೆ ಅತ್ಯಾಚಾರವೆಸಗುವುದು ಬೇರೆ, ಕಾಸ್ಟಿಂಗ್ ಕೌಚ್ ಬೇರೆ. 2020ರ ಮೊದಲು ನೀಡಿದ ಸಂದರ್ಶನದಲ್ಲಿ ನಾನು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದೆ. ದಯವಿಟ್ಟು ಈಗ ಆ ವೀಡಿಯೊವನ್ನು ಬಳಸಬೇಡಿ ಮತ್ತು ಜನರನ್ನು ದಾರಿ ತಪ್ಪಿಸಬೇಡಿ. ಕೆಲಸದ ಸ್ಥಳಗಳು ಸುರಕ್ಷಿತವಾಗಿರಬೇಕು. ಕಾಸ್ಟಿಂಗ್ ಕೌಚ್ ಅನ್ನು ಮಹಿಳೆ ಒಪ್ಪದಿದ್ದಾಗ ಆಕೆಯ ಅಭಿಪ್ರಾಯವನ್ನು ಗೌರವಿಸಬೇಕು ಎಂದು ರಶ್ಮಿ ಹೇಳಿದ್ದಾರೆ.
ರಶ್ಮಿ ಅವರು ಕಿರುತೆರೆಯಲ್ಲಿ ಜನಪ್ರಿಯರಾದರೂ ಬೆಳ್ಳಿತೆರೆಯಲ್ಲಿ ಅದೃಷ್ಟ ಬರುತ್ತಿಲ್ಲ. ಗುಂಟೂರು ಟಾಕೀಸ್ ಯಶಸ್ಸು ಕಂಡರೂ ಆ ನಂತರ ಬಂದ ತನು ನಾನಂತ, ಅಂತಂ, ಅಂತಕುಮ ಚಿತ್ರಗಳು ಅಷ್ಟಾಗಿ ವರ್ಕೌಟ್ ಆಗಲಿಲ್ಲ. ಹಾಗಾಗಿ ಟಿವಿ ಶೋಗಳ ಮೇಲೆ ಮಾತ್ರ ಗಮನ ಹರಿಸಿದ್ದಾರೆ. (ಏಜೆನ್ಸೀಸ್)