ಸುಮುಖ ಎಂಬ ಫಿಸಿಕ್ಸ್ ಟೀಚರ್; ಸದ್ಯದಲ್ಲೇ ಚಿತ್ರೀಕರಣ ಆರಂಭ

Sumukha
Published on

ಬೆಂಗಳೂರು: ‘ರಾಜಸ್ಥಾನ್ ಡೈರೀಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಶಶಿಕುಮಾರ್ ಮತ್ತು ನಟಿ-ನಿರ್ದೇಶಕಿ ನಂದಿತಾ ಅವರ ಮಗ ಸುಮುಖ, ಇದೀಗ 2ನೇ ಚಿತ್ರದಲ್ಲಿ ಬರೀ ಹೀರೋ ಅಷ್ಟೇ ಅಲ್ಲ, ನಿರ್ದೇಶಕರಾಗಿಯೂ ಭಡ್ತಿ ಪಡೆದಿದ್ದಾರೆ. ಸುಮುಖ, ‘ಫಿಸಿಕ್ಸ್ ಟೀಚರ್’ ಎಂಬ ಚಿತ್ರ ಮಾಡುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ. ಹೆಸರೇ ಹೇಳುವಂತೆ ಇದೊಬ್ಬ ಫಿಸಿಕ್ಸ್ ಟೀಚರ್ ಸುತ್ತ ಸುತ್ತುತ್ತದೆ. ವಿಶೇಷವೆಂದರೆ, ಈ ಚಿತ್ರವು ಮೂರು ಲೊಕೇಶನ್​ಗಳಲ್ಲಿ, ನಾಲ್ಕು ಪ್ರಮುಖ ಪಾತ್ರಗಳ ಸುತ್ತ ನಡೆಯುತ್ತದಂತೆ. ಸುಮುಖಗೆ ನಾಯಕಿಯಾಗಿ ‘ಚೂರಿಕಟ್ಟೆ’, ‘ಕರಾಲಿ’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಪ್ರೇರಣಾ ಕಂಬಂ ನಟಿಸಿದರೆ, ಮಂಡ್ಯ ರಮೇಶ್ ಮತ್ತು ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಫಿಸಿಕ್ಸ್ ಟೀಚರ್’ ಬಗ್ಗೆ ಮಾತನಾಡುವ ಸುಮುಖ, ‘ಚಿತ್ರದಲ್ಲಿ ಮಾತು ಅಥವಾ ಫಿಸಿಕ್ಸ್ ಹೆಚ್ಚಿರುವುದಿಲ್ಲ. ಪ್ರೇಕ್ಷಕರು ಇಷ್ಟಪಡುವ ಒಂದು ಮನರಂಜನಾತ್ಮಕ ಚಿತ್ರವಾಗಲಿದೆ. ಪ್ರತಿ ದೃಶ್ಯ ಸಹ ಮುಂದೇನು, ಮುಂದೇನು ಎನ್ನುವಂತಿದೆ. ಅ.7ರಿಂದ 15 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ವರ್ಷದ ಕೊನೆಗೆ ಚಿತ್ರವನ್ನು ಚಿತ್ರಮಂದಿರಗಳು ಮತ್ತು ಒಟಿಟಿಯಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ’ ಎನ್ನುತ್ತಾರೆ. ‘ಪ್ರತಿ ದೃಶ್ಯ ಸಹ ಯೋಚನೆಗೆ ಹಚ್ಚುತ್ತದೆ. ಫಿಸಿಕ್ಸ್ ಟೀಚರ್​ಗೆ ಒಂದು ಕ್ಯೂಟ್ ಪ್ರೇಮಕಥೆ ಇರುತ್ತದೆ. ನಾನು ಜಲಜ ಎಂಬ ಸೈಕಾಲಜಿ ಟೀಚರ್ ಪಾತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ ಪ್ರೇರಣಾ. ಚಿತ್ರಕ್ಕೆ ಸ್ಕಂದ ಸುಬ್ರಹ್ಮಣ್ಯ ಚಿತ್ರಕಥೆ ಬರೆಯುವುದರ ಜತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಪಾಸಿಂಗ್ ಶಾಟ್ ಫಿಲಂಸ್​ನಡಿ ಶಶಿಕುಮಾರ್ ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net