ಐದು ಕಥೆಗಳಿಗೆ ಕಾಗೆಯೇ ಲಿಂಕ್​ … 'ಪೆಂಟಗನ್​' ಟ್ರೇಲರ್​ ಬಿಡುಗಡೆ

Pentagon Trailer
Published on

ಬೆಂಗಳೂರು: ಗುರು ದೇಶಪಾಂಡೆ ನಿರ್ಮಾಣದ ಮತ್ತು ನಿರ್ದೇಶನದ ಸಿನಿಮಾ 'ಪೆಂಟಗನ್​', ಏ. 07ಕ್ಕೆ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಇತ್ತೀಚೆಗೆ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಪೆಂಟಗನ್', ಒಂದೇ ಚಿತ್ರದಲ್ಲಿ ಐದು ಕಥೆಗಳನ್ನು ಹೇಳುವ ಅಂಥಾಲಜಿ ಸಿನಿಮಾ, ಈ ಚಿತ್ರವನ್ನು ನಿರ್ದೇಶಕ ಕಮ್ ಗುರು ದೇಶಪಾಂಡೆ ತಮ್ಮ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದು, ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ಒಂದೊಂದು ಕಥೆಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರಗಳಲ್ಲಿ ಹಿರಿಯನಟ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅನುಷಾ ರೈ, ವಂಶಿಕೃಷ್ಣ, ಅಪೂರ್ವ ಮುಂತಾದವರು ಅಭಿನಯಿಸಿದ್ದು, ಜಿ.ಅಕಾಡೆಮಿಯ ಒಂದಷ್ಟು ವಿದ್ಯಾರ್ಥಿಗಳು ಸಹ ಇದರಲ್ಲಿ ಕೆಲಸ ಮಾಡಿದ್ದಾರೆ.

ಟ್ರೇಲರ್​ ಬಿಡುಗಡೆ ನಂತರ ಮಾತನಾಡಿರುವ ಗುರು ದೇಶಪಾಂಡೆ, 'ಈ ಚಿತ್ರವನ್ನು ನಾವು ೨೦೨೦ರಲ್ಲಿ ಶುರು ಮಾಡಿದೆವು. ಎರಡೂ ಕೋವಿಡ್ ಅಲೆಗಳನ್ನು ದಾಟಿ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದೇವೆ. ಚಿತ್ರದಲ್ಲಿ ಬರುವ ಡೆತ್ ಥೀಮ್ ೫ ಕಥೆಗಳಲ್ಲೂ ಕಾಮನ್ ಆಗಿದ್ದು, ಈ ಐದೂ ಕತೆಗಳ ಕೊನೆಯಲ್ಲಿ ಕಾಗೆಯೊಂದು ಕತೆಗಳಿಗೆ ಲಿಂಕ್ ಮಾಡುತ್ತ ಹೋಗುತ್ತದೆ. ಈ ಚಿತ್ರದ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳಿಗೆ ಈ ಚಿತ್ರದ ಮೂಲಕ ಅವಕಾಶ ನೀಡಿದ್ದೇವೆ' ಎಂದು ಹೇಳಿದರು.

ಗ್ರಾಮೀಣ ಸೊಗಡಿನ 'ದೋಣಿ ಸಾಗಲಿ' ಕಥೆಯನ್ನು ಕಿರಣ್ ಕುಮಾರ್ ನಿರ್ದೇಶಿಸಿದ್ದು, ಇದರ ಮುಖ್ಯ ಪಾತ್ರದಲ್ಲಿ ಕೃತಿಕಾ ದೇಶಪಾಂಡೆ, ರವಿಶಂಕರ್, ವಂಶಿ, ಅನುಶಾ ರೈ ಮುಂತಾದವರು ನಟಿಸಿದ್ದಾರೆ. ಮತ್ತೊಂದು ಕಥೆಯ ಹೆಸರು 'ಮೈಸೂರುಪಾಕ್'. 'ಶಿವಾಜಿ ಸುರತ್ಕಲ್' ಖ್ಯಾತಿಯ ಆಕಾಶ ಶ್ರೀವತ್ಸ ಇದನ್ನು ನಿರ್ದೇಶಿಸಿದ್ದಾರೆ. ಕರೊನಾ ಸಮಯದಲ್ಲಿ ಹಿರಿಯರಿಗೆ ಹೇಗಲ್ಲಾ ತೊಂದರೆಯಾಯ್ತು ಎಂಬುದನ್ನು ಇದರಲ್ಲಿ ಹೇಳಲಾಗಿದೆ. ಹಿರಿಯನಟ ಬಿರಾದಾರ್ ಹಾಗೂ ಬಾಲನಟಿ ಆರಾಧ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡೇಟಿಂಗ್ ಆಪ್​ಗಳಿಂದಾಗಿ ಯುವಜನತೆ ಹೇಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ರಾಘು ಶಿವಮೊಗ್ಗ ನಿರ್ದೇಶನದ 'ಕಾಮಾತುರಾಣಾ ನಭಯಂ, ನಲಜ್ಜ' ಚಿತ್ರದಲ್ಲಿ ಹೇಳಲಾಗಿದೆ. ಪ್ರಕಾಶ್ ಬೆಳವಾಡಿ, ತನಿಶಾ, ಪ್ರೇರಣಾ ಕಂಬಂ, ಕಿರಣ್ ನಾಯಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಉಳಿದಂತೆ ಚಂದ್ರಮೋಹನ್ ನಿರ್ದೇಶನದ ಕಾಮಿಡಿ ಥ್ರಿಲ್ಲರ್ ಕಥೆ ಇರುವ 'ಮಿಸ್ಟರ್ ಗೋಪಿಕೆಫೆ' ಅಲ್ಲದೆ ಗುರು ದೇಶಪಾಂಡೆ ನಿರ್ದೇಶನದ ಚಿತ್ರದಲ್ಲಿ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಅಶ್ವಿನಿ, ನಟ ಪೃಥ್ವಿ ಅಂಬರ್ ಮುಂತಾದವರು ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net