

ಬೆಂಗಳೂರು: ‘ಕಿಸ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಶ್ರೀಲೀಲಾ, ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದು, ತೆಲುಗಿನ ‘ಪೆಳ್ಳಿ ಸಂದಡಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈಗ ಆ ಚಿತ್ರವು ಸದ್ದಿಲ್ಲದೆ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇದೀಗ ಭರದಿಂದ ಸಾಗುತ್ತಿದ್ದು, ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಆರಂಭದಲ್ಲೇ, ಶ್ರೀಲೀಲಾ ತೆಲುಗು ಚಿತ್ರವನ್ನು ಒಪ್ಪಿಕೊಂಡಿದ್ದ ಸುದ್ದಿ ಬಂದಿತ್ತು. ಒಂದು ಕಡೆ ಕನ್ನಡದ ‘ಬೈಟು ಲವ್’, ಇನ್ನೊಂದು ಕಡೆ ‘ಪೆಳ್ಳಿ ಸಂದಡಿ’ ಚಿತ್ರಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಶ್ರೀಲೀಲಾ, ಈ ಪೈಕಿ ಲಾಕ್ಡೌನ್ಗೂ ಮುನ್ನವೇ ತೆಲುಗು ಚಿತ್ರಗಳಲ್ಲಿನ ತಮ್ಮ ಕೆಲಸವನ್ನು ಮುಗಿಸಿದ್ದರು.
ಎರಡು ತಿಂಗಳುಗಳ ಹಿಂದೆ, ಇದೇ ಚಿತ್ರದ ‘ಪ್ರೇಮಂಟೆ ಏಂಟಿ ...’ ಎಂಬ ಲಿರಿಕಲ್ ಹಾಡು ಬಿಡುಗಡೆಯಾಗಿ ಜನಪ್ರಿಯವಾಗಿತ್ತು. ಅಂದಹಾಗೆ, 1996ರಲ್ಲಿ ಶ್ರೀಕಾಂತ್ ನಟಿಸಿದ್ದ ‘ಪೆಳ್ಳಿ ಸಂದಡಿ’ ಚಿತ್ರವನ್ನೇ ಈಗಿನ ಕಾಲಘಟ್ಟಕ್ಕೆ ಬದಲಾಯಿಸಿ ಚಿತ್ರೀಕರಣ ಮಾಡಿದ್ದಾರೆ ನಿರ್ದೇಶಕರಾದ ಗೌರಿ ರೊನಂಕಿ. ಮೂಲ ಸಿನಿಮಾ ನಿರ್ದೇಶನ ಮಾಡಿದ್ದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್, ಈ ಚಿತ್ರದ ನಿರ್ದೇಶನದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಮೂಲ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದ ಶ್ರೀಕಾಂತ್ ಅವರ ಪುತ್ರ ಮೇಕ ರೋಶನ್ ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಲವ್ಸ್ಟೋರಿ ಆಗಿದ್ದು, ತೆಲುಗಿನ ಜನಪ್ರಿಯ ಕಲಾವಿದರು ನಟಿಸಿದ್ದಾರೆ. ಇನ್ನು, ಹಿರಿಯ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.