

ಮುಂಬೈ: 'ನಾನು ಯಾರಲ್ಲೂ ಕ್ಷಮೆ ಕೇಳಿಲ್ಲ. ಕೇಳೋದೂ ಇಲ್ಲ. ಏಕೆಂದರೆ, ನಾನು ಯಾವ ತಪ್ಪನ್ನೂ ಮಾಡಿಲ್ಲ ಅಥವಾ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ಅನುರಾಗ್ ನನ್ನ ಬಳಿ ಏನು ಹೇಳಿದ್ದರೋ ಅದನ್ನೇ ಹೇಳಿದ್ದೇನೆ' ಎಂದು ನಟಿ ಪಾಯಲ್ ಘೋಶ್ ಹೇಳಿದ್ದಾರೆ.
ಕಳೆದ ತಿಂಗಳಷ್ಟೇ, ನಟ-ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಘೋಶ್ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಈ ಸಂದರ್ಭದಲ್ಲಿ ಅನುರಾಗ್ ಕಶ್ಯಪ್ ಖುದ್ದು ತಮ್ಮ ಬಳಿ ತಮಗೆ ನಟಿಯರಾದ ರಿಚಾ ಚಡ್ಢಾ, ಮಾಹಿ ಗಿಲ್ ಮತ್ತು ಹ್ಯೂಮಾ ಖುರೇಷಿ ಮುಂತಾದವರು ಸಹಕರಿಸಿದ್ದಾಗಿ ಹೇಳಿಕೊಂಡಿದ್ದರು.
ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದುತಂದಿದ್ದಕ್ಕಾಗಿ ಪಾಯಲ್ ಮೇಲೆ ಮುಂಬೈ ಹೈಕೋರ್ಟ್ನಲ್ಲಿ ರಿಚಾ ಮಾನನಷ್ಟ ಮೊಕ್ಕದ್ದಮೆಯನ್ನು ಹೂಡಿದ್ದಾರೆ. ಯಾವ್ಯಾವುದೋ ವಿಚಾರಕ್ಕೆ ತಮ್ಮನ್ನು ಎಳೆದು ತಂದಿರುವುದರ ಜತೆಗೆ, ಹೆಸರಿಗೆ ಮಸಿ ಬಳಿಯುವುದಕ್ಕೆ ಪ್ರಯತ್ನಿಸಿದ್ದಿಕ್ಕೆ ಒಂದು ಕೋಟಿ 10 ಲಕ್ಷ ರೂಪಾಯಿಗಳನ್ನು ಕಟ್ಟಿಕೊಡಬೇಕು ಎಂದು ಕೇಸ್ ಹಾಕಿದ್ದರು.
ಈ ಸಂಬಂಧ ಬುಧವಾರ ನ್ಯಾಯಾಲಯದಲ್ಲಿ ಪಾಯಲ್ ಕ್ಷಮೆ ಕೇಳಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು. ಪಾಯಲ್ ಅವರು ತಾವು ರಿಚಾ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯುವುದಕ್ಕೆ ಸಿದ್ಧರಾಗಿರುವುದರ ಜತೆಗೆ, ಕ್ಷಮೆಯನ್ನೂ ಕೇಳಿದ್ದಾರೆ ಎಂದು ಪಾಯಲ್ ಪರ ವಕೀಲ ನಿತಿನ್ ಸಾತ್ಪುಟೆ ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ ಎಂದು ಹೇಳಲಾಗಿತ್ತು.
ಆದರೆ, ಇದು ಅಪ್ಪಟ ಸುಳ್ಳು ಎಂದು ಪಾಯಲ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಾನು ಕ್ಷಮೆ ಕೇಳಿಲ್ಲ. ನನಗೂ ರಿಚಾಗೂ ಸಂಬಂಧವಿಲ್ಲ. ಕಷ್ಟದಲ್ಲಿರುವಾಗ ಮಹಿಳೆಯರು ಪರಸ್ಪರ ಒಬ್ಬರಿಗೊಬ್ಬರು ಹೆಗಲು ನೀಡಬೇಕು. ನಾನು ರಿಚಾ ವಿರುದ್ಧ ಯಾವುದೇ ಕೆಟ್ಟ ಮಾತೂ ಆಡಿಲ್ಲ. ನನ್ನ ಹೋರಾಟವೇನಿದ್ದರೂ ಅನುರಾಗ್ ಕಶ್ಯಪ್ ವಿರುದ್ಧ. ಆತನ ನಿಜವಾದ ಮುಖವನ್ನು ಜಗತ್ತಿಗೆ ತೋರಿಸುವುದಕ್ಕೆ ಹೊರಟಿದ್ದೇನೇ ಹೊರತು ಬೇರೆ ಯಾರ ವಿರುದ್ಧವೂ ಪೈಪೋಟಿ ಮಾಡುವುದಕ್ಕೆ ನನಗೆ ಇಷ್ಟವಿಲ್ಲ' ಎಂದು ಅವರು ಹೇಳಿದ್ದಾರೆ.