ಮೆಟ್ರೋದಲ್ಲಿ ಶೂಟಿಂಗ್​ಗೆ ಹೋದ್ರಂತೆ ಪವನ್​ ಕಲ್ಯಾಣ್​

Pawan Kalyan - Final
Published on

ಹೈದರಾಬಾದ್​: ಸಿನಿಮಾ ನಟ-ನಟಿಯರು ಶೂಟಿಂಗ್​ ಸ್ಪಾಟ್​ಗೆ ಕಾರ್​ ಬಿಟ್ಟು ಯಾರಿಗೂ ಗೊತ್ತಾಗದಂತೆ ಸೈಕಲ್​ ಅಥವಾ ಬೈಕ್​ನಲ್ಲಿ ಹೋದ ಅದೆಷ್ಟೋ ಘಟನೆಗಳಿವೆ. ಕಳೆದ ವರ್ಷ ನಟ ಸುದೀಪ್​, ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ 'ಕೋಟಿಗೊಬ್ಬ 3' ಚಿತ್ರದ ಶೂಟಿಂಗ್​ಗೆ ಸೈಕಲ್​ನಲ್ಲಿ ಹೋಗಿದ್ದರು.

ಈಗ ತೆಲುಗು ನಟ 'ಪವರ್​ ಸ್ಟಾರ್​' ಪವನ್​ ಕಲ್ಯಾಣ್​ ಸಹ ಅದೇ ತರಹ ಮಾಡಿದ್ದಾರೆ. 'ವಕೀಲ್​ ಸಾಬ್​' ಚಿತ್ರದ ಚಿತ್ರೀಕರಣಕ್ಕೆ ಅವರು ಮೆಟ್ರೋದಲ್ಲಿ ಹೋಗುವ ಮೂಲಕ ಹಲವರಲ್ಲಿ ಹುಬ್ಬೇರಿಸಿದ್ದಾರೆ.

'ವಕೀಲ್​ ಸಾಬ್​' ಚಿತ್ರದ ಚಿತ್ರೀಕರಣವು ಇದೀಗ ಹೈದರಾಬಾದ್​ನ ಮಿಯಾಪುರ್​ನಲ್ಲಿ ನಡೆಯುತ್ತಿದೆ. ಶೂಟಿಂಗ್​ ಸ್ಪಾಟ್​ಗೆ ಯಾಕೆ ಮೆಟ್ರೋದಲ್ಲಿ ಹೋಗಬಾರದು ಎಂದನಿಸಿದ್ದೇ ತಡ, ನಿರ್ಮಾಪಕ ದಿಲ್​ ರಾಜು ಮತ್ತು ಆಪ್ತಸಹಾಯಕರು ಮತ್ತು ಬಾಡಿಗಾರ್ಡ್​ಗಳ ಜತೆಗೆ ಯಾರಿಗೂ ಗೊತ್ತಾಗದಂತೆ ಪವನ್​ ಕಲ್ಯಾಣ್​ ಮೆಟ್ರೋ ಹತ್ತಿದ್ದಾರೆ.

ಮಾಧಾಪುರ ಮೆಟ್ರೋ ಸ್ಟೇಶನ್​ನಲ್ಲಿ ಹತ್ತಿದ ಅವರು ಅಮೀರ್​ಪೇಟೆಯಲ್ಲಿ ಇಳಿದು, ಅಲ್ಲಿಂದ ಇನ್ನೊಂದು ಮೆಟ್ರೋದಲ್ಲಿ ಮಿಯಾಪುರ್​ ಸ್ಟೇಶನ್​ ತಲುಪಿದ್ದಾರೆ. ಇಷ್ಟೆಲ್ಲಾ ಓಡಾಡಿದರೂ, ಪವನ್​ ಕಲ್ಯಾಣ್​ ತಮ್ಮ ನಡುವೆ ಇದ್ದಾರೆ ಎಂದು ಸಹಪ್ರಯಾಣಿಕರ್ಯಾರಿಗೂ ಗೊತ್ತಾಗಿಲ್ಲ.

ಅಷ್ಟೇ ಅಲ್ಲ, ಪವನ್​ ತಮ್ಮ ಸಹಪ್ರಯಾಣಿಕರ ಜತೆಗೆ ಒಂದಿಷ್ಟು ಉಭಯಕುಶಲೋಪರಿಯನ್ನೂ ನಡೆಸಿದ್ದಾರೆ. ಆದರೆ, ಯಾರಿಗೂ ತಾವು ಮಾತನಾಡುತ್ತಿರುವುದು ಪವನ್​ ಕಲ್ಯಾಣ್​ ಜತೆಗೆ ಎಂಬ ಸುಳಿವು ಸಿಕ್ಕಿಲ್ಲ ಅದಕ್ಕೆ ಕಾರಣ, ಪವನ್​ ಮುಖಕ್ಕೆ ಮಾಸ್ಕ್​ ಧರಿಸುವುದರ ಜತೆಗೆ ಕೂಲಿಂಗ್​ ಗ್ಲಾಸ್​ ಸಹ ತೊಟ್ಟಿದ್ದರು. ಹಾಗಾಗಿ ಅವರೊಬ್ಬ ದೊಡ್ಡ ನಟ ಇರಬಹುದು ಎಂದು ಸಹಪ್ರಯಾಣಿಕರಿಗೆ ಗೊತ್ತಾಗಲಿಲ್ಲವಂತೆ.

ಸದ್ಯ 'ವಕೀಲ್​ ಸಾಬ್​' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪವನ್​ ಆದಷ್ಟು ಬೇಗ ಅದನ್ನು ಮುಗಿಸಿ, ಕೃಷ್​ ಜಗಲರ್​ಮುಡಿ ಮತ್ತು ಹರೀಶ್​ ಶಂಕರ್​ ನಿರ್ದೇಶನದ ಚಿತ್ರಗಳಲ್ಲಿ ನಟಿಸಲಿದ್ದಾರೆ. ಇದೆಲ್ಲದರ ಜತೆಗೆ 'ಅಯ್ಯಪನಂ ಕೋಶಿಯಂ'ನ ತೆಲುಗು ರೀಮೇಕ್​ನಲ್ಲಿ ಸಹ ಕಾಣಿಸಿಕೊಳ್ಳುತ್ತಿರುವ ಸುದ್ದಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net