ಅಂತಾರಾಷ್ಟ್ರೀಯ ಸ್ಪೈ ಥ್ರಿಲ್ಲರ್​ನಲ್ಲಿ ಹೃತಿಕ್​ ರೋಶನ್​

Hrithik Roshan - Final
Published on

ಮುಂಬೈ: ಹಾಲಿವುಡ್​ ಚಿತ್ರಗಳಿಗೆ ಹೃತಿಕ್​ ರೋಶನ್​ ಹೇಳಿ ಮಾಡಿಸಿದಂತಿದ್ದು, ಅವರ್ಯಾಕೆ ಹಾಲಿವುಡ್​ನಲ್ಲಿ ಟ್ರೈ ಮಾಡಬಾರದು ಎಂಬ ಮಾತು ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಈ ವಿಷಯವನ್ನು ಹೃತಿಕ್​ ಗಂಭೀರವಾಗಿ ಪರಿಗಣಿಸಿಲ್ಲವೋ ಅಥವಾ ಪರಿಗಣಿಸಿದ್ದರೂ ಸೂಕ್ತ ಅವಕಾಶಗಳು ಸಿಗಲಿಲ್ಲವೋ ಗೊತ್ತಿಲ್ಲ.

ಆದರೆ, ಇತ್ತೀಚೆಗೆ ಹೃತಿಕ್​ ರೋಶನ್​ ಅವರು ಅಮೇರಿಕಾದ ಗರ್ಶ್​ ಏಜನ್ಸಿ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಈ ಸಂಸ್ಥೆಯು ಹೃತಿಕ್​ ಹಾಲಿವುಡ್​ ಜನರಿಗೆ ಪರಿಚಯಿಸುವ ಮತ್ತು ಚಿತ್ರಗಳಲ್ಲಿ ಅವಕಾಶಗಳನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆಯಂತೆ.

ಈ ಸಂಬಂಧ ಹೃತಿಕ್​ ಈಗಾಗಲೇ ಒಂದು ಹಾಲಿವುಡ್​ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಅಂತಾರಾಷ್ಟ್ರೀಯ ಮಟ್ಟದ ಸ್ಪೈ ಥ್ರಿಲ್ಲರ್​ ಚಿತ್ರದ ನಿರ್ಮಾಣಕ್ಕೆ ಕೈಹಾಕಿದ್ದು, ಆ ಚಿತ್ರಕ್ಕೆ ಹೃತಿಕ್​ ರೋಶನ್​ ಅವರನ್ನು ಪರಿಗಣಿಸುವ ಸಾಧ್ಯತೆ ಇದೆಯಂತೆ.

ಈ ನಿಟ್ಟಿನಲ್ಲಿ ಹೃತಿಕ್​ ರೋಶನ್​ ಒಂದು ಆಡಿಶನ್​ ಸಹ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಿಯಮದ ಪ್ರಕಾರ ಲಾಸ್​ ಆಂಜಲೀಸ್​ನಲ್ಲಿ ಹೃತಿಕ್​ ಅವರು ಆಡಿಷನ್​ ಕೊಡಬೇಕಿತ್ತು. ಆದರೆ, ಕರೊನಾ ಭಯವಿರುವುದರಿಂದ, ಅವರು ತಮ್ಮ ಮುಂಬೈನ ಮನೆಯಲ್ಲೇ ಆಡಿಷನ್​ನಲ್ಲಿ ಭಾಗವಿಸಿದ್ದಾರಂತೆ. ಇನ್ನು, ಹೃತಿಕ್​ಗೆ ಚಿತ್ರದಲ್ಲೊಂದು ಅವಕಾಶ ಕೊಡಬೇಕೋ ಬೇಡವೋ ಎಂಬ ನಿರ್ಧಾರವನ್ನು ನಿರ್ಮಾಣ ಸಂಸ್ಥೆ ತೆಗೆದುಕೊಳ್ಳಲಿದೆ.

ಕಳೆದ ವರ್ಷ 'ಸೂಪರ್​ 30' ಮತ್ತು 'ವಾರ್​' ಎಂಬ ಎರಡು ಸೂಪರ್​ ಹಿಟ್​ ಚಿತ್ರಗಳನ್ನು ನೀಡಿರುವ ಹೃತಿಕ್​ ರೋಶನ್​, ಮುಂದಿನ ವರ್ಷ 'ಕ್ರಿಶ್​ 4' ಚಿತ್ರದಲ್ಲಿ ನಟಿಸಲಿದ್ದು, ಆ ಚಿತ್ರದ ನಂತರ ಹಾಲಿವುಡ್​ ಚಿತ್ರಗಳಲ್ಲಿ ನಟಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net