ವರ್ಕ್​ಔಟ್ ಆಗಲಿಲ್ಲ... ಮೂರು ಮದುವೆಗಳ ಬಗ್ಗೆ ಪವನ್​ ಕಲ್ಯಾಣ್​ ಕೊಟ್ಟಿದ್ದ ಶಾಕಿಂಗ್ ಹೇಳಿಕೆ ಈಗ ವೈರಲ್ | Pawan Kalyan

Pawan Kalyan
ವರ್ಕ್​ಔಟ್ ಆಗಲಿಲ್ಲ... ಮೂರು ಮದುವೆಗಳ ಬಗ್ಗೆ ಪವನ್​ ಕಲ್ಯಾಣ್​ ಕೊಟ್ಟಿದ್ದ ಶಾಕಿಂಗ್ ಹೇಳಿಕೆ ಈಗ ವೈರಲ್ | Pawan Kalyan
Published on: 

Pawan Kalyan Divorce: ತೆಲುಗು ಚಿತ್ರರಂಗದ 'ಪವರ್ ಸ್ಟಾರ್', ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದಲ್ಲಿ ಮತ್ತೊಮ್ಮೆ ಶಾಕಿಂಗ್ ಬೆಳವಣಿಗೆಯೊಂದು ನಡೆದು ಹೋಗಿದೆ. ದೀಪಾವಳಿ ಹಬ್ಬದಂದೇ ತಮ್ಮ ಮೂರನೇ ಪತ್ನಿ ರಷ್ಯಾ ಮೂಲದ ಅನ್ನಾ ಕೊಣಿದಾಲ ಜತೆಗಿನ 13 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್​ಬೈ ಹೇಳಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನಟನಿಗೆ ಸಂಬಂಧಿಸಿದ ಹಳೆಯ ಹೇಳಿಕೆಗಳು, ನಾಲ್ಕನೇ ಮದುವೆ ಕುರಿತಾದ ಚರ್ಚೆಗಳು ಜೋರಾಗಿವೆ.

ದೀಪಾವಳಿ ದಿನವೇ ಡಿವೋರ್ಸ್​

ಪವನ್ ಕಲ್ಯಾಣ್ ಅವರು ತಮ್ಮ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರಿಂದ ದೂರವಾಗುವ ನಿರ್ಧಾರವನ್ನು ಜಂಟಿಯಾಗಿ ದೀಪಾವಳಿ ಹಬ್ಬದಂದು ಬಹಿರಂಗವಾಗಿ ಪ್ರಕಟಿಸಿದರು. 13 ವರ್ಷಗಳ ವೈವಾಹಿಕ ಜೀವನದ ಬಳಿಕ ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ಬೇರೆಯಾಗುತ್ತಿರುವುದಾಗಿ ಸೋಮವಾರ ರಾತ್ರಿ ಇಬ್ಬರೂ ಜಂಟಿ ಹೇಳಿಕೆ ಬಿಡುಗಡೆ ಮಾಡಿ, ತಮ್ಮಿಬ್ಬರ ನಡುವಿನ ದಾಂಪತ್ಯ ಸಂಬಂಧವನ್ನು ಕಡಿದುಕೊಂಡರು.

"ನಮ್ಮ ಜೀವನದ ಮಹತ್ವದ ಅವಧಿಯನ್ನು ಒಟ್ಟಿಗೆ ಕಳೆದ ಬಳಿಕ, ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಗೌರವದೊಂದಿಗೆ ಬೇರೆ ದಾರಿಯಲ್ಲಿ ಸಾಗಲು ನಿರ್ಧರಿಸಿದ್ದೇವೆ. ನಮ್ಮ ದಾಂಪತ್ಯ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಮತ್ತು ಮಕ್ಕಳ ಜವಾಬ್ದಾರಿಯುತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಕ್ಷೇಮವೇ ನಮ್ಮ ಮೊದಲ ಆದ್ಯತೆಯಾಗಿರುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

3 ವಿವಾಹದ ಬಗ್ಗೆ ಹಳೆಯ ಹೇಳಿಕೆ

ಪವನ್ ಕಲ್ಯಾಣ್ ಮತ್ತು ಅನ್ನಾ ಜೋಡಿ ದಿಢೀರ್​ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿರುವ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಭಾರೀ ಸಂಚಲನ ಮೂಡಿಸಿದೆ. 13 ವರ್ಷಗಳ ವೈವಾಹಿಕ ಬದುಕಿನ ಬಳಿಕ ಪರಸ್ಪರ ಒಪ್ಪಿಗೆಯಿಂದ ದೂರವಾಗುವ ನಿರ್ಧಾರ ಘೋಷಿಸಿದ ಬಳಿಕ ನಟನ ಮೂರು ಮದುವೆಗಳು ಮತ್ತು ಈಗ ನಾಲ್ಕನೇ ವಿವಾಹ ಯಾರೊಂದಿಗೆ ಆಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದೇ ಸಮಯದಲ್ಲಿ, ಒಮ್ಮೆ ಪವನ್​ ಕಲ್ಯಾಣ್​ ಸ್ವತಃ ಮೂರು ವಿವಾಹ ಆದ ಬಗ್ಗೆ ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

ಮೂರು ಮದುವೆಗಳ ಬಗ್ಗೆ ಪವನ್ ಹೇಳಿದ್ದೇನು?

ಎನ್​ಡಿಟಿವಿ ವರದಿ ಪ್ರಕಾರ, 2023ರಲ್ಲಿ ತೆಲುಗಿನ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರ ಜತೆಗಿನ ಚಾಟ್ ಶೋನಲ್ಲಿ ಮನಬಿಚ್ಚಿ ಮಾತನಾಡಿದ್ದ ಪವನ್ ಕಲ್ಯಾಣ್, ನನಗೆ ಮದುವೆಯಾಗುವ ಆಸೆಯೇ ಇರಲಿಲ್ಲ. ಬ್ರಹ್ಮಚಾರಿಯಾಗಿ ಉಳಿದು ಯೋಗದ ಹಾದಿಯಲ್ಲಿ ಸಾಗಬೇಕು ಎಂದುಕೊಂಡಿದ್ದೆ. ನನ್ನ ಜೀವನವನ್ನು ಹಿಂದಿರುಗಿ ನೋಡಿದಾಗ, ನಿಜವಾಗಿಯೂ ಇದೆಲ್ಲವೂ ನನಗೇ ಆಗಿರೋದಾ ಎಂದು ಅನಿಸುತ್ತೆ. ನಾನು ಯಾವುದನ್ನೂ ಪ್ಲ್ಯಾನ್​ ಮಾಡಿದವನಲ್ಲ. ಎಲ್ಲವೂ ಸಾಂಪ್ರದಾಯಿಕ ರೀತಿಯಲ್ಲೇ ನಡೆದಿವೆ" ಎಂದಿದ್ದರು.

Also Read
ತುಟಿ ದೊಡ್ಡದಾದಷ್ಟೂ ವರದಕ್ಷಿಣೆ ಹೆಚ್ಚು! ಈ ಬುಡಕಟ್ಟಿನ ಸಂಪ್ರದಾಯದ ಹಿಂದಿರುವ ವಿಚಿತ್ರ ಕಥೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ | Lip Plate Tradition
Pawan Kalyan

"ನನ್ನ ಮೊದಲ ಮದುವೆ ಹಿರಿಯರೇ ನಿಶ್ಚಯಿಸಿದ ಸಾಂಪ್ರದಾಯಿಕ ವಿವಾಹವಾಗಿತ್ತು. ಆದರೆ, ಪ್ರತಿಯೊಂದು ಸಂಬಂಧವೂ ಅಂದುಕೊಂಡಂತೆ ಯಶಸ್ವಿಯಾಗುವುದಿಲ್ಲ. ಕೆಲವೊಮ್ಮೆ ದಂಪತಿಗಳು ಬೇರ್ಪಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಎರಡನೇ ಮದುವೆಯ ಸಂದರ್ಭದಲ್ಲಿಯೂ ಭಿನ್ನಾಭಿಪ್ರಾಯಗಳು ಹಾಗೂ ವಿಭಿನ್ನ ಪರಿಸ್ಥಿತಿಗಳು ಕಾರಣವಾಗಿದ್ದವು. ಒಬ್ಬರೊಂದಿಗೆ ವರ್ಕ್​ಔಟ್​ ಆಗಲಿಲ್ಲ ಅಂದಾಗ ಇನ್ನೊಬ್ಬರನ್ನು ಮದುವೆಯಾದೆ. ನಾನು ಮೂವರನ್ನೂ ಒಂದೇ ಸಮಯದಲ್ಲಿ ಏನೋ ಮದುವೆಯಾಗಲಿಲ್ಲ" ಎಂದರು.

"ಮೂವರ ಜತೆಗೂ ಒಂದೇ ಮನೆಯಲ್ಲಿಯೂ ಇರಲಿಲ್ಲ. ಒಬ್ಬರೊಂದಿಗಿನ ಸಂಬಂಧ ಸರಿಹೋಗದಿದ್ದಾಗ ಮತ್ತೊಂದು ಮದುವೆಯಾಯಿತು. ಇದೆಲ್ಲವೂ ಆಸೆ ಅಥವಾ ಆಕರ್ಷಣೆಯಿಂದ ನಡೆದದ್ದಲ್ಲ. ಒಬ್ಬರಿಗೆ ಡಿವೋರ್ಸ್​ ಮಾಡಿದ ನಂತರವೇ ಇನ್ನೊಬ್ಬರ ಜತೆ ಮದುವೆ ಆಗಿದ್ದೇನೆ. ಇಂತಹ ಘಟನೆಗಳು ನೋವನ್ನುಂಟು ಮಾಡುತ್ತವೆ" ಎಂದು ಹೇಳಿದ್ದರು,(ಏಜೆನ್ಸೀಸ್).