ಅಂದು ದರ್ಶನ್ ಜತೆಗೆ ಪವಿತ್ರಾ ಗೌಡ ಕೂಡ ಇದ್ದರಂತೆ? ಬಯಲಾಯ್ತು ಸ್ಫೋಟಕ ಸಂಗತಿ!

Darshan
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಅವರ ಗೆಳತಿ ನಟಿ ಪವಿತ್ರಾ ಗೌಡರನ್ನು ಪೊಲೀಸರು ವಶಕ್ಕೆ ಪಡೆದಿರುವ ಬೆನ್ನಲ್ಲೇ ಸ್ಫೋಟಕ ಸಂಗತಿಗಳು ಬಯಲಾಗುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡ ಮಾಡಿದ್ದ ಪೋಸ್ಟ್​ಗೆ ರೇಣುಕಾಸ್ವಾಮಿ ಕಾಮೆಂಟ್ ಮಾಡಿದ್ದ. ಈ ಹಿನ್ನಲೆ ರೇಣುಕಾಸ್ವಾಮಿಯನ್ನ ಜೂನ್​ 8ರಂದು ದರ್ಶನ್​ ಕರೆಸಿಕೊಂಡು, ಆರ್​ಆರ್​ ನಗರದ ಮನೆ ಬಳಿ ಇರುವ ಶೆಡ್​ನಲ್ಲಿ ಕೂಡಿಹಾಕಿದ್ದರು ಎನ್ನಲಾಗಿದೆ. ಈ ವೇಳೆ ಪವಿತ್ರಾ ಗೌಡ ನಟ ದರ್ಶನ್ ಜತೆಗಿದ್ದ ಎಂದು ಹೇಳಲಾಗಿದೆ. ಆಗ ರೇಣುಕಾಸ್ವಾಮಿಗೆ ದರ್ಶನ್ ಕೂಡ ಹೊಡೆದಿರುವ ಆರೋಪ ಕೇಳಿಬಂದಿದೆ.

ಗಿರಿನಗರದ ಮೂವರು ಯುವಕರು ಹೊಡೆದ ಏಟಿಗೆ ರೇಣುಕಾಸ್ವಾಮಿ ಸ್ಪಾಟ್​ನಲ್ಲೇ ಸಾವಿಗೀಡಾಗಿದ್ದಾನೆ. ಬಳಿಕ ರೇಣುಕಾಸ್ವಾಮಿ ಮೃತದೇಹವನ್ನು ಕಾಮಾಕ್ಷಿಪಾಳ್ಯ ಮೋರಿಯಲ್ಲಿ ಎಸೆದಿದ್ದರು. ಮೃತದೇಹ ಸಿಕ್ಕಾಗ ಅದರ ಪರಿಶೀಲನೆ ನಡೆಸಿದ್ದ ಪೊಲೀಸರು ಯಾರೋ ಕೊಲೆ ಮಾಡಿದ್ದಾರೆ ಎಂಬ ಆಯಾಮದಲ್ಲಿ ತನಿಖೆ ನಡೆಸಿದ್ದರು. ಆತನ ಮೊಬೈಲ್‌ ಪರಿಶಿಲನೆ ಮಾಡಿದ್ದಾಗ ಆರ್​ಆರ್​ ನಗರದ ದರ್ಶನ್ ಮನೆ ತೋರಿಸಿತ್ತು ಎಂದು ಹೇಳಲಾಗಿದೆ.

ಈ ಪ್ರಕರಣ ಸಂಬಂಧ ನಿನ್ನೆ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು. ಇದೀಗ ಇದೇ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ದರ್ಶನ್​ ಗೆಳತಿ ಪವಿತ್ರಾ ಗೌಡರನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂದು ಮುಂಜಾನೆ ಮೈಸೂರಿನ ತೂಗುದೀಪ ಫಾರ್ಮ್​ ಹೌಸ್​ನಲ್ಲಿ ದರ್ಶನ್​ ಅವರನ್ನು ವಶಕ್ಕೆ ಪಡೆದಿರುವ ಕಾಮಾಕ್ಷಿ ಠಾಣಾ ಪೊಲೀಸರು, ಮೈಸೂರಿನಿಂದ ಬೆಂಗಳೂರಿಗೆ ದರ್ಶನ್​ ಅವರನ್ನು ಕರೆತರುತ್ತಿದ್ದಾರೆ. ಕೊಲೆ ಕೇಸ್​ನಲ್ಲಿ ಆರೋಪಿಗಳ ಜೊತೆ ದರ್ಶನ್​ ನಿರಂತರ ಸಂಪರ್ಕದಲ್ಲಿರುವ ಶಂಕೆಯು ವ್ಯಕ್ತವಾಗಿದೆ. ಆರೋಪಿಯ ವಿಚಾರಣೆ ವೇಳೆಯೂ ನಟ ದರ್ಶನ್ ಹೆಸರು ಬಾಯಿಬಿಟ್ಟಿದ್ದಾರೆಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net