ಯುವ ಪತ್ನಿ ಶ್ರೀದೇವಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ್ರಾ ನಟಿ ಸಪ್ತಮಿ ಗೌಡ!

saptami
Published on

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಯುವ ರಾಜ್‌ಕುಮಾರ್‌ ಅವರು ತಮ್ಮ ಪತ್ನಿ ಶ್ರೀದೇವಿ ಅವರಿಗೆ ವಿಚ್ಛೇದನ ನೀಡಲ ಮುಂದಾಗಿದ್ದಾರೆ. ಈ ಕುರಿತಾಗಿ ಕೋರ್ಟ್‌ಗೆ ಅರ್ಜಿ ಕೂಡಾ ಸಲ್ಲಿಕೆ ಮಾಡಿದ್ದಾರೆ. ಆದರೆ ಕಾಂತಾರ ಕ್ವೀನ್‌ ಸಪ್ತಮಿ ಗೌಡ ಜತೆ ಯುವ ರಾಜ್‌ಕುಮಾರ್‌ ಸಂಬಂಧ ಇದೆ ಎಂದು ಪತ್ನಿ ಶ್ರೀದೇವಿ ಆರೋಪ ಮಾಡಿದ್ದರು. ಇದೀಗ ಶ್ರೀದೇವಿ ವಿರುದ್ಧ ತಿರುಗಿ ಬಿದ್ದಿರುವ ಸಪ್ತಮಿ ಗೌಡ ಕುಟುಂಬಸ್ಥರು ಮಾನಹಾನಿ ಕೇಸ್‌ ದಾಖಲಿಸಲು ಮುಂದಾಗಿದ್ದಾರೆ.

ನಟ ಯುವ ರಾಜ್‌ಕುಮಾರ್‌ ಅವರು ಪತ್ನಿ ಶ್ರೀದೇವಿ ಭೈರಪ್ಪ  ಅವರಿಗೆ ಡಿವೋರ್ಸ್ ನೋಟಿಸ್‌ ನೀಡಿದ ಬಳಿಕ ಇಬ್ಬರ ನಡುವಿನ ಆರೋಪ- ಪ್ರತ್ಯಾರೋಪಗಳು ಜಾಸ್ತಿಯಾಗಿವೆ. ಅದರಲ್ಲೂ, ಅನೈತಿಕ ಸಂಬಂಧಗಳ ಆರೋಪಗಳು ಇನ್ನೂ ಹೆಚ್ಚಾಗಿವೆ.

“ಶ್ರೀದೇವಿ ಭೈರಪ್ಪ ಅವರು ರಾಧಯ್ಯ ಎಂಬ ವ್ಯಕ್ತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ” ಎಂಬುದಾಗಿ ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ. ಇನ್ನು, ನಟನ ಲೀಗಲ್‌ ನೋಟಿಸ್‌ಗೆ ಉತ್ತರಿಸಿದ ಶ್ರೀದೇವಿ ಭೈರಪ್ಪ, “ಯುವ ರಾಜ್‌ಕುಮಾರ್‌ ನಟಿ ಸಪ್ತಮಿ ಗೌಡ  ಜತೆ ಸಂಬಂಧ ಹೊಂದಿದ್ದಾರೆ” ಎಂಬುದಾಗಿ ಆರೋಪಿಸಿದ್ದಾರೆ. ಆ ಮೂಲಕ ಡಿವೋರ್ಸ್‌ ಪ್ರಕರಣವೀಗ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ.

ಯುವ ರಾಜ್‌ಕುಮಾರ್ ಪರ ವಕೀಲ ನೀಡಿದ ನೋಟೀಸ್‌ಗೆ ತಿರುಗೇಟು ನೀಡಿದ ಶ್ರೀದೇವಿ, ಯುವ ರಾಜಕುಮಾರ್ ಹಾಗೂ ಸಪ್ತಮಿ ಗೌಡ ರೂಮ್‌ನಲ್ಲಿ ಇದ್ದರು ಎಂದು ಉಲ್ಲೇಖಿಸಿದ್ದರು ಎನ್ನಲಾಗಿದೆ. ಹೀಗಾಗಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್ ದಾಖಲಿಸುವ ಬಗ್ಗೆ ಸಪ್ತಮಿ ಗೌಡ ಕುಟುಂಬಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸಪ್ತಮಿ ಗೌಡ ತಂದೆ ಎಸ್‌ಕೆ ಉಮೇಶ್‌ ಖಾಸಗಿವಾಹಿನಿಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net