ರುದ್ರಿಗೆ ಇನ್ನೊಂದು ಪ್ರಶಸ್ತಿ

Rudri
Published on

ಬೆಂಗಳೂರು: ಈ ಹಿಂದೆ ಇಟಲಿಯ ಓನಿರೋಸ್ ಚಿತ್ರೋತ್ಸವದಲ್ಲಿ ‘ರುದ್ರಿ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ಪಾವನಾ ಗೌಡ, ಇದೀಗ ಠ್ಯಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ ಇನ್ನೂ ಎರಡು ಪ್ರಶಸ್ತಿಗಳನ್ನು ಈ ಚಿತ್ರೋತ್ಸವದಲ್ಲಿ ಚಿತ್ರ ಪಡೆದುಕೊಂಡಿದೆ.

ಒಂದು ಕಡೆ ಚಿತ್ರವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಸಂತೋಷದ ವಿಷಯವಾದರೆ, ಇನ್ನೊಂದು ಕಡೆ ನಮ್ಮವರಿಗೆ ಈ ಚಿತ್ರ ತೋರಿಸಲಾಗುತ್ತಿಲ್ಲ ಎಂಬ ಬೇಸರವೂ ಇದೆ ಎನ್ನುತ್ತಾರೆ ಪಾವನಾ. ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಏಪ್ರಿಲ್​ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇತ್ತು. ಅಷ್ಟರಲ್ಲಿ ಲಾಕ್​ಡೌನ್ ಘೋಷಣೆಯಾಯಿತು. ಇದು ನಮ್ಮ ಸಮಾಜದ, ನಮ್ಮ ಸೊಗಡಿನ ಸಿನಿಮಾ. ಹಾಗಾಗಿ ಅವರಿಗೆ ಇನ್ನೂ ತಲುಪಿಲ್ಲ ಎಂಬ ಬೇಸರವಿದೆ. ಆದರೆ, ಚಿತ್ರಕ್ಕೆ ಇಷ್ಟೆಲ್ಲ ಮನ್ನಣೆ ಸಿಗುತ್ತಿರುವುದರಿಂದ, ಪ್ರೇಕ್ಷಕರಿಗೆ ಚಿತ್ರದ ಬಗ್ಗೆ ಭರವಸೆ ಮತ್ತು ನಿರೀಕ್ಷೆಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಪಾವನಾ.

ಗ್ರಾಮೀಣ ಸೊಗಡಿಗೆ ಪ್ರಶಸ್ತಿ: ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯೊಂದನ್ನಾಧರಿಸಿ ಈ ಚಿತ್ರ ಮಾಡಲಾಗಿದೆ ಎನ್ನುವ ಅವರು, ‘ಹೆಣ್ಣಿನ ಮೇಲಿನ ಶೋಷಣೆ ಕುರಿತಾದ ಚಿತ್ರ ಇದು. ಮಹಾಭಾರತದ ಕಾಲದಿಂದಲೂ ಮಹಿಳೆಯ ಮೇಲೆ ಶೋಷಣೆ ಆಗುತ್ತಲೇ ಬಂದಿದೆ. ಈಗಿನ ಯುವತಿಯ ಮೇಲೆ ಶೋಷಣೆಯಾದಾಗ, ಅವಳೇ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾಳೆ ಎಂಬುದು ಚಿತ್ರದ ಕಥೆ. ಇಂಥದ್ದೊಂದು ನಮ್ಮ ಸೊಗಡಿನ ಕಥೆಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿರುವುದು ಸಂತೋಷದ ವಿಷಯ. ಬರೀ ಅರ್ಬನ್ ಕಥೆಗಳೇ ಹೆಚ್ಚುತ್ತಿರುವ ಸಮಯದಲ್ಲಿ, ಗ್ರಾಮೀಣ ಚಿತ್ರವೊಂದು ಪ್ರಶಸ್ತಿ ಪಡೆಯುತ್ತಿರುವುದು ಖುಷಿಯ ವಿಚಾರ’ ಎನ್ನುತ್ತಾರೆ ಪಾವನಾ.

ಆರು ಚಿತ್ರಗಳಲ್ಲಿ ನಟನೆ: ‘ರುದ್ರಿ’ ಚಿತ್ರವಲ್ಲದೆ, ಪಾವನಾ ಅಭಿನಯದ ‘ಮೈಸೂರು ಡೈರೀಸ್’ ಚಿತ್ರ ಸಹ ಬಿಡುಗಡೆಗೆ ಸಿದ್ಧವಾಗಿದೆಯಂತೆ. ‘ಆ ಎರಡೂ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗಬೇಕಿತ್ತು. ಇದಲ್ಲದೆ ‘ಕಲಿವೀರ’ ಮತ್ತು ‘ತೂತುಮಡಿಕೆ’ ಚಿತ್ರಗಳ ಕೆಲಸ ಮುಗಿದಿತ್ತು. ಲಾಕ್​ಡೌನ್ ಇಲ್ಲದಿದ್ದರೆ, ಇಷ್ಟರಲ್ಲಿ ಆ ನಾಲ್ಕೂ ಚಿತ್ರಗಳು ಬಿಡುಗಡೆಯಾಗುತ್ತಿದ್ದವೇನೋ’ ಎಂದು ಪಾವನಾಗೂ ಅನಿಸಿದ್ದಿದೆ. ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಈ ನಾಲ್ಕರ ಜತೆಗೆ, ‘ಮೆಹಬೂಬಾ’ ಮತ್ತು ‘ಫೈಟರ್’ ಚಿತ್ರಗಳಲ್ಲೂ ನಟಿಸಿರುವ ಅವರು, ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರಂತೆ. ‘ಎರಡೂ ಚಿತ್ರಗಳ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಕರೊನಾದಿಂದ ಚಿತ್ರಗಳು ನಿಧಾನವಾಗುತ್ತಿವೆ ಎನ್ನುವುದರ ಜತೆಗೆ, ಇದು ಎಲ್ಲರ ಅಸ್ತಿತ್ವದ ಪ್ರಶ್ನೆ. ಎಲ್ಲರೂ ತಮ್ಮದೇ ರೀತಿಯಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ ಮತ್ತು ಮುಂದೇನು ಎಂದು ಯೋಚನೆ ಮಾಡಿದರೆ ಭಯವಾಗುತ್ತದೆ. ಅದರ ಮಧ್ಯೆಯೇ ಪ್ರಶಸ್ತಿ ಸಿಕ್ಕ ವಿಚಾರ ಖುಷಿ ಕೊಡುವುದಷ್ಟೇ ಅಲ್ಲ, ಆತ್ಮವಿಶ್ವಾಸ ಸಹ ಹೆಚ್ಚಿಸುತ್ತದೆ’ ಎಂದು ಮಾತು ಮುಗಿಸಿದರು ಪಾವನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net