

ಮುಂಬೈ: ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರವು ಜಗತ್ತಿನಾದ್ಯಂತ ಜ.25ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಆದರೆ, ಈ ಮಧ್ಯೆ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ ಎಂಬ ಸುದ್ದಿಯೊಂದು ಬಾಲಿವುಡ್ನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಬಲವಾಗಿ ಕೇಳಿ ಬಂದಿತ್ತು. ಆದರೆ, ಇದೀಗ ಬಂದಿರುವ ಸುದ್ದಿಯ ಪ್ರಕಾರ ಚಿತ್ರವು ಅಂದುಕೊಂಡಂತೆಯೇ ಬಿಡುಗಡೆಯಾಗಲಿದ್ದು, ಮೊದಲ ಹಂತವಾಗಿ ಇದೇ 10ರಂದು ಟ್ರೈಲರ್ ಬಿಡುಗಡೆಯಾಗಲಿದೆಯಂತೆ.
'ಪಠಾಣ್' ಚಿತ್ರದ 'ಬೇಷರಮ್ ರಂಗ್' ಚಿತ್ರವು ಡಿಸೆಂಬರ್ನಲ್ಲಿ ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಹಾಡನ್ನು ಡಿಲೀಟ್ ಮಾಡಬೇಕು, ಇಲ್ಲವಾದರೆ ಚಿತ್ರವನ್ನು ಬಾಯ್ಕಾಟ್ ಮಾಡುವ ಕೂಗು ಕೇಳಿ ಬಂದಿತ್ತು. ಇನ್ನು, ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಬದಲಾವಣೆಗಳನ್ನು ಸೂಚಿಸುವುದರ ಜತೆಗೆ, ಆ ಬದಲಾವಣೆಗಳನ್ನು ಅಳವಡಿಸಿಕೊಂಡು, ತಂದು ಚಿತ್ರ ತೋರಿಸಬೇಕು ಎಂದು ಸೂಚಿಸಿತ್ತು.
ಯಾವಾಗ ಬದಲಾವಣೆಯ ಮಾತು ಬಂತೋ, ಆಗ ಚಿತ್ರ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂಬ ಗುಸುಗುಸ ಶುರುವಾಯಿತು. ಅದಕ್ಕೆ ಸರಿಯಾಗಿ, ಚಿತ್ರತಂಡದವರು ಇನ್ನೂ ಟ್ರೈಲರ್ ಬಿಡುಗಡೆ ಮಾಡಿಲ್ಲ. ಇವೆಲ್ಲವೂ ಮುಂದೂಡಿಕೆಯ ಸಂಕೇತ ಎಂಬ ತೀರ್ಮಾನಕ್ಕೆ ಬಂದ ಒಂದಿಷ್ಟು ಜನ, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಸುದ್ದಿ ಹಬ್ಬಿಸಿದರು.
ಆದರೆ, ಇದೀಗ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿಲ್ಲ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಜ.10ರಂದು ಟ್ರೈಲರ್ ಬಿಡುಗಡೆಯೂ ನಿಗದಿಯಾಗಿದೆಯಂತೆ. ಈ ಟ್ರೈಲರ್ ಮೂರು ನಿಮಿಷಗಳ ಅವಧಿಯದ್ದಾಗಿದ್ದು, ಭರ್ಜರಿ ಆಕ್ಷನ್ ದೃಶ್ಯಗಳಿವೆಯಂತೆ. ಈ ಟ್ರೈಲರ್ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಾಗಿದೆ, ಶಾರುಖ್ ಅಭಿಮಾನಿಗಳು ಈ ಟ್ರೈಲರ್ಗೆ ತುದಿಗಾಲಲ್ಲಿ ಕಾಯುತ್ತಿದ್ದಾರೆ.
'ಪಠಾಣ್' ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ಶಾರೂಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮುಂತಾದವರು ಅಭಿನಯಿಸಿದ್ದಾರೆ. ಯಶ್ರಾಜ್ ಫಿಲಂಸ್ ಈ ಚಿತ್ರವನ್ನು ನಿರ್ಮಿಸಿದೆ.