ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್​ ಖಲೀಫಾ ಮೇಲೆ 'ಪಠಾಣ್​' ಟ್ರೈಲರ್​

Pathaan - Burj Khalifa
Published on

ಮುಂಬೈ: ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರವು ಇದೇ 25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಅದರಲ್ಲಿ ಆಕ್ಷನ್​ ದೃಶ್ಯಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

'ಪಠಾಣ್​', ನಾಲ್ಕು ವರ್ಷಗಳ ನಂತರ ಶಾರುಖ್​ ಖಾನ್​ ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ. ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ಔಟ್​ ಅಂಡ್​ ಔಟ್​ ಆಕ್ಷನ್​ ಚಿತ್ರದಲ್ಲಿ ಶಾರುಖ್​ ಖಾನ್​ ನಟಿಸಿದ್ದಾರೆ. ಹೀಗಾಗಿ ಈ ಚಿತ್ರವನ್ನು ಶತಾಯಗತಾಯ ಗೆಲ್ಲಿಸಲೇಬೇಕು ಎಂದು, ಚಿತ್ರವನ್ನು ಸಾಧ್ಯವಾದಷ್ಟು ಪ್ರಮೋಟ್​ ಮಾಡುತ್ತಿದ್ದಾರೆ ಅವರು.

ಇತ್ತೀಚೆಗೆ ಮುಕ್ತಾಯವಾದ ಫಿಫಾ ವರ್ಲ್ಡ್​ ಕಪ್​ನಲ್ಲಿ ಅವರು ಚಿತ್ರದ ಪ್ರಚಾರ ಮಾಡಿದ್ದರು. ಈಗ ಅವರು ಜಗತ್ತಿನ ಅತೀ ಎತ್ತರದ ಕಟ್ಟಡವಾದ ಬುರ್ಜ್​ ಖಲೀಫಾ ಮೇಲೆ 'ಪಠಾಣ್​' ಚಿತ್ರದ ಟ್ರೈಲರ್​ ತೋರಿಸಿ ಬಂದಿದ್ದಾರೆ. ಈ ಮೂಲಕ ದುಬೈ ಮತ್ತು ಯುಎಇನಲ್ಲಿ ಚಿತ್ರವನ್ನು ಭರ್ಜರಿಯಾಗಿ ಪ್ರಚಾರ ಮಾಡಿ ಬಂದಿದ್ದಾರೆ.

ಬುರ್ಜ್​ ಖಲೀಫಾ ಮೇಲೆ ಚಿತ್ರವೊಂದರ ಟ್ರೈಲರ್​ ತೋರಿಸುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮೊದಲು ರಜನಿಕಾಂತ್​ ಅಭಿನಯದ '2.0' ಮತ್ತು ಸುದೀಪ್​ ಅಭಿನಯದ ಕನ್ನಡದ 'ವಿಕ್ರಾಂತ್​ ರೋಣ' ಚಿತ್ರದ ಟೀಸರ್​ ಮತ್ತು ಟ್ರೈಲರ್​ಗಳನ್ನು ಪ್ರದರ್ಶಿಸಲಾಗಿತ್ತು.

'ಪಠಾಣ್​' ಚಿತ್ರದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ, ಡಿಂಪಲ್​ ಕಪಾಡಿಯಾ ಮುಂತಾದವರು ಅಭಿನಯಿಸಿದ್ದಾರೆ. ಸಲ್ಮಾನ್​ ಖಾನ್​ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಯಶ್​ರಾಜ್​ ಫಿಲಂಸ್​ನಡಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net