

ಮುಂಬೈ: ಪ್ರತಿಯೊಬ್ಬ ನಟ-ನಟಿ ಸಹ ಚಿತ್ರರಂಗಕ್ಕೆ ಬರುವುದಕ್ಕಿಂತ ಮುನ್ನ, ಬೇರೇನೋ ಕೆಲಸ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ನೇರವಾಗಿ ಚಿತ್ರರಂಗಕ್ಕೆ ಬಂದರೂ, ಅಲ್ಲಿ ಬೇರೇನೋ ಮಾಡಿಕೊಂಡು, ಅಭಿನಯದತ್ತ ವಾಲಿರುತ್ತಾರೆ. ನೇರವಾಗಿ ನಾಯಕ ಅಥವಾ ನಾಯಕಿಯಾದವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಬಹಳ ಕಡಿಮೆ ಎಂದೇ ಹೇಳಬೇಕು.
ಈಗ್ಯಾಕೆ ಈ ವಿಷಯವೆಂದರೆ, ನಟಿ ಪರಿಣೀತಿ ಚೋಪ್ರಾ ಸಹ ಅದೇ ಸಾಲಿಗೆ ಸೇರಿದವರು. ಇಂದು ಅವರು ಬಾಲಿವುಡ್ನ ಬೇಡಿಕೆಯ ನಟಿ ಇರಬಹುದು. ಆದರೆ, ಅದಕ್ಕೂ ಮುನ್ನ ಅವರು ಚಿತ್ರರಂಗದಲ್ಲಿ ಬೇರೇನೋ ಕೆಲಸ ಮಾಡುತ್ತಿದ್ದರು. ಆ ಕೆಲಸ ಏನು ಎಂದು ಪರಿಣೀತಿ ಇದೀಗ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನಟಿಯಾಗುವ ಮುನ್ನ ಅನೂಷ್ಕಾ ಶರ್ಮ ಅವರ ಪಿಆರ್ಓ ಆಗಿದ್ದ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
'ನಾನು ಮೊದಲು ಯಶ್ರಾಜ್ ಫಿಲಂಸ್ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ಅದರಲ್ಲೂ ಅನೂಷ್ಕಾ ಶರ್ಮ ಅವರ ಪಿಆರ್ಓ ಆಗಿದ್ದೆ. ಮೂರು ತಿಂಗಳ ಕಾಲ ಅವರ ಜತೆಗಿದ್ದೆ. ಆ ಸಂದರ್ಭದಲ್ಲಿ ಅವರ ಸಂದರ್ಶನಗಳನ್ನು ಫಿಕ್ಸ್ ಮಾಡುತ್ತಿದ್ದವಳು ನಾನೇ. ಆ ನಂತರ 'ಲೇಡೀಸ್ ವರ್ಸಸ್ ರಿಕ್ಕಿ ಬೆಹ್ಲ್' ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿತು. ಅನೂಷ್ಕಾ ಶರ್ಮ ಅವರ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ನಾನು, ಮೂರೇ ತಿಂಗಳಲ್ಲಿ ಅವರ ಸಹನಟಿಯಾದೆ' ಎಂದು ನೆನಪಿಸಿಕೊಂಡಿದ್ದಾರೆ ಪರಿಣೀತಿ.