25 ಕೋಟಿ ರೂಪಾಯಿ ಎಫೆಕ್ಟ್​: ಮತ್ತೆ ಹೇರಾ ಫೇರಿ-3 ಸಿನಿಮಾ ತಂಡ ಸೇರಿಕೊಂಡ ಪರೇಶ್​ ರಾವಲ್​! Hera Pheri 3

Hera Pheri 3
Published on

Hera Pheri 3 : ಹೇರಾ ಫೇರಿ ಜನರ ಮೆಚ್ಚುಗೆ ಗಳಿಸಿರುವ ಪ್ರಸಿದ್ಧ ಹಾಸ್ಯ ಸಿನಿಮಾ. ಎರಡು ಭಾಗ ಯಶಸ್ವಿಯಾಗಿದ್ದು, ಮೂರನೇ ಭಾಗದ ಚಿತ್ರೀಕರಣ ನಡೆಯುತ್ತಿದೆ. ಸುಮಾರು 20 ವರ್ಷಗಳ ನಂತರ ಸೆಟ್ಟೇರಿರುವ ಬಹುನಿರೀಕ್ಷಿತ ಹೇರಾ ಫೇರಿ ಸಿನಿಮಾದ ಮೂರನೇ ಭಾಗಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಪರೇಶ್ ರಾವಲ್, ಟಬು, ಓಂ ಪುರಿ, ಗುಲ್ಶನ್ ಗ್ರೋವರ್ ಮುಂತಾದ ತಾರೆಯರು ಈ ಸರಣಿಯಲ್ಲಿ ನಟಿಸಿದ್ದಾರೆ.

ಅಕ್ಷಯ್ ಕುಮಾರ್ ಅವರ ನಿರ್ಮಾಣ ಕಂಪನಿ ಕೇಪ್ ಆಫ್ ಗುಡ್ ಫಿಲ್ಮ್ಸ್​ 3ನೇ ಭಾಗವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದೆ. ಆದಾಗ್ಯೂ, ಜನಪ್ರಿಯ ನಟ ಪರೇಶ್ ರಾವಲ್ (ಶಂಕರ್ ದಾದಾ ಎಂಬಿಬಿಎಸ್ ಖ್ಯಾತಿ) ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಈ ಸಿನಿಮಾದಿಂದ ಆಚೆ ಬರುತ್ತಿರುವುದಾಗಿ ಘೋಷಿಸಿದರು. ಕೊನೆಯ ಎರಡು ಸರಣಿಗಳಲ್ಲಿ ಪರೇಶ್​ ರಾವಲ್​ ಅವರ ಪಾತ್ರವು ಬಹಳ ನಿರ್ಣಾಯಕವಾಗಿತ್ತು. ಆದರೆ, ಮೂರನೇ ಭಾಗದಿಂದ ಅವರು ನಿರ್ಗಮಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿದಾಗ ಚಿತ್ರದ ಮೇಲಿನ ಎಲ್ಲ ನಿರೀಕ್ಷೆಗಳು ಹುಸಿಯಾದವು. ಬಳಿಕ, ಅಕ್ಷಯ್ ಕುಮಾರ್ ಅವರ ನಿರ್ಮಾಣ ಕಂಪನಿ ಪರೇಶ್​ ರಾವಲ್​ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಯಿತು. ಆದರೆ, ಇದೀಗ ಯೂಟರ್ನ್​ ತೆಗೆದುಕೊಂಡಿರುವ ಪರೇಶ್​ ರಾವಲ್​ ಹೇರಾ ಫೇರಿ ಮೂರನೇ ಭಾಗದಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ.

'ಹೇರಾ ಫೇರಿ 3' ಚಿತ್ರದಿಂದ ಹೊರನಡೆಯುವುದಾಗಿ ಘೋಷಿಸಿದ ಒಂದು ತಿಂಗಳ ನಂತರ ಮತ್ತೆ ಚಿತ್ರತಂಡಕ್ಕೆ ಮರಳುತ್ತಿರುವುದಾಗಿ ನಟ ಪರೇಶ್ ರಾವಲ್ ಇತ್ತೀಚೆಗೆ ಪಾಡ್​ಕ್ಯಾಸ್ಟ್​ ಒಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ಚಿತ್ರತಂಡದೊಂದಿಗೆ ನನ್ನ ಪರಿಸ್ಥಿತಿ ಸುಧಾರಿಸಿದೆ ಮತ್ತು ನಿರ್ದೇಶಕ ಪ್ರಿಯದರ್ಶನ್ ಉತ್ತಮ ಸ್ನೇಹಿತ ಎಂದು ಹೇಳಿದ್ದಾರೆ. ಅಲ್ಲದೆ, ಅಕ್ಷಯ್ ಕುಮಾರ್ ಮತ್ತು ಸುನೀಲ್ ಶೆಟ್ಟಿ ಜತೆಗೆ ಈ ಸಿನಿಮಾಗಾಗಿ ನಾನು ಕೂಡ ಕೈ ಜೋಡಿಸಿದ್ದೇನೆ. ಈ ಮೂವರು ನನಗೆ ಒಳ್ಳೆಯ ಸ್ನೇಹಿತರು ಎಂದು ಪರೇಶ್ ರಾವಲ್ ಹೇಳಿದ್ದಾರೆ.

ಅಂದಹಾಗೆ, ಪರೇಶ್​ ರಾವಲ್ ಅವರು ಚಿತ್ರದಿಂದ ಹಠಾತ್ತನೆ ನಿರ್ಗಮಿಸಿದ ಬಳಿಕ ಅಕ್ಷಯ್ ಕುಮಾರ್ ಅವರ ನಿರ್ಮಾಣ ಕಂಪನಿ ಅವರ ವಿರುದ್ಧ 25 ಕೋಟಿ ರೂ. ಮೊಕದ್ದಮೆ ಹೂಡಿತು. ಪರೇಶ್​ ಅವರ ಈ ನಡೆಯು ಆರ್ಥಿಕ ನಷ್ಟವನ್ನು ಉಂಟುಮಾಡಿದೆ ಮತ್ತು ನಿರ್ಮಾಣದ ವೇಳಾಪಟ್ಟಿಯನ್ನು ಅಡ್ಡಿಪಡಿಸಿದೆ ಎಂದು ನಿರ್ಮಾಣ ಕಂಪನಿ ಆರೋಪಿಸಿತ್ತು. ಕಾನೂನು ಭಯದಿಂದಲೇ ಪರೇಶ್​ ಅವರ ಈ ಯೋಜನೆಗೆ ಮರಳುತ್ತಿದ್ದಾರೆ ಎಂದು ತೋರುತ್ತಿದೆ.

ಈ ಚಿತ್ರಕ್ಕಾಗಿ ಪರೇಶ್ ರಾವಲ್ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಅವರು ಈಗಾಗಲೇ ಚಿತ್ರ ನಿರ್ಮಾಣ ಕಂಪನಿಯಿಂದ ಮುಂಗಡ ಹಣ ಪಡೆದಿದ್ದಾರೆ. ಅದಕ್ಕಾಗಿಯೇ ಕಾನೂನು ತೊಡಕುಗಳಿಂದಾಗಿ ಅವರು ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಚಲನಚಿತ್ರ ಪ್ರಿಯರನ್ನು ರಂಜಿಸುವ ಭಾರಿ ನಿರೀಕ್ಷೆಗಳ ನಡುವೆ 'ಹೇರಾ ಫೇರಿ 3' ಚಿತ್ರ ತಯಾರಾಗುತ್ತಿದೆ. ಬಾಲಿವುಡ್‌ನ ಟಾಪ್ ಹೀರೋ ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಿಯದರ್ಶನ್ ಇದನ್ನು ನಿರ್ದೇಶಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net