

ಭಾರತದಲ್ಲಿ ಸಿನಿಮಾ ಬಗ್ಗೆ ಜನರಲ್ಲಿ ವಿಪರೀತ ಎನ್ನುವಷ್ಟು ಕ್ರೇಜ್ ಜನರಲ್ಲಿ ಇದೆ. ಒಂದು ಚಿತ್ರದ ಬಜೆಟ್ ಎಷ್ಟು, ಅದರ ಕಲೆಕ್ಷನ್ ಎಷ್ಟು ಎಂದು ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುವ ಸಾಕಷ್ಟು ಯುವಕರು ನಮ್ಮಲ್ಲಿದ್ದಾರೆ.
ಸಿನಿಮಾ ಬಗ್ಗೆ ಜನರಲ್ಲಿ ಇರುವ ಆಸಕ್ತಿ ಮತ್ತು ಕುತೂಹಲದ ಬಗ್ಗೆ ನಟ ಪಂಕಜ್ ತ್ರಿಪಾಠಿ ಮಾತನಾಡಿದ್ದಾರೆ. ಅದರಲ್ಲೂ ಯುವಕರಿಗಿರುವ ಸಿನಿಮಾ ಕ್ರೇಜ್ ಬಗ್ಗೆ ಮಾತನಾಡಿರುವ ಅವರು, ಸಿನಿಮಾಗಿಂಥ ಯೋಚಿಸಬೇಕಾದ ಹಲವು ವಿಷಯಗಳು ನಮ್ಮಲ್ಲಿವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಜನ ಸಾಮಾನ್ಯರು ಸಿನಿಮಾಗಿಂತ ಹೆಚ್ಚಾಗಿ ಶಿಕ್ಷಣಕ್ಕೆ ಮತ್ತು ವೈದ್ಯಕೀಯ ವ್ಯವಸ್ಥೆಗೆ ಎಷ್ಟು ಬಜೆಟ್ ಇಟ್ಟಿದ್ದಾರೆ ಎಂದು ತಲೆ ಕೆಡಿಸಿಕೊಳ್ಳಬೇಕು. ಸರ್ಕಾರದ ನೀತಿಗಳ ಬಗ್ಗೆ ಅವರಿಗೆ ಗೊತ್ತಿರಬೇಕು. ಸರ್ಕಾರ ತಮ್ಮ ಜಿಲ್ಲೆಯ ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆಗೆ ಎಷ್ಟು ಬಜೆಟ್ ಮೀಸಲಿಟ್ಟಿದೆ ಎಂಬುದರ ಬಗ್ಗೆ ಗಮನ ಇರಬೇಕು' ಎಂದು ಅವರು ಹೇಳಿದ್ದಾರೆ.
ಜನ ಯಾಕೆ ಒಂದು ಸಿನಿಮಾದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ ಎನ್ನುವ ಅವರು, 'ಜನ ಯಾಕೆ ಸಿನಿಮಾದ ಬಜೆಟ್ ಮತ್ತು ಅದರ ಕಲೆಕ್ಷನ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ ಎನ್ನುವುದುದೇ ಗೊತ್ತಾಗುವುದಿಲ್ಲ. ಬಜೆಟ್ ಎಷ್ಟೇ ಇರಲಿ, ಜನ ಕೊಡಬೇಕಿಲ್ಲ. ಲಾಭ ಬಂದರೆ ಸಿನಿಮಾದವರು ಜನರಿಗೆ ಕೊಡುವುದಿಲ್ಲ. ಹಾಗಿರುವಾಗ ಆ ಕಲೆಕ್ಷನ್ ಬಗ್ಗೆ ಯಾಕೆ ಅಷ್ಟೊಂದು ಯೋಚನೆ ಮಾಡ್ತೀರಾ? ಇಷ್ಟಕ್ಕೂ ಒಂದು ಸಿನಿಮಾದಲ್ಲಿ ದುಡ್ಡು ಬಂದ್ರೆ ನಿಮಗೇನಾದರೂ ಶೇರ್ ಸಿಗುತ್ತದಾ' ಎಂದು ಪ್ರಶ್ನೆ ಹಾಕಿದ್ದಾರೆ.
ಸದ್ಯದಲ್ಲೇ ಬಿಡುಗಡೆಯಾಗಲಿರುವ ಜಾಹ್ನವಿ ಕಪೂರ್ ಅಭಿನಯದ 'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್' ಚಿತ್ರದಲ್ಲಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಗುಂಜನ್ ತಂದೆ, ಅನೂಪ್ ಸಕ್ಸೇನಾ ಆಗಿ ಅವರು ಅಭಿನಯಿಸಿದ್ದು, ರಿಯಲ್ ಲೈಫ್ನಲ್ಲಿ ಹೇಗಿದ್ದಾರೋ, ಈ ಚಿತ್ರದಲ್ಲೂ ಅದೇ ತರಹದ ಪಾತ್ರ ಸಿಕ್ಕಿದೆ ಎಂದು ಅವರು ಖುಷಿಯಾಗಿದ್ದಾರೆ.