

ಮುಂಬೈ: ಬಾಡಿ ಶೇಮಿಂಗ್ ವಿರುದ್ಧ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ( Salman Khan ) ಬಿಗ್ಬಾಸ್ ವೇದಿಕೆಯಲ್ಲಿ ಆಕ್ರೋಶ ಹೊರ ಹಾಕಿದ ಬೆನ್ನಲ್ಲೇ ಪಾಕಿಸ್ತಾನದ ರೇಡಿಯೋ ಜಾಕಿ (ಆರ್ಜೆ) ಡಾ. ಎಜಾಜ್ ವಾರಿಸ್, ನಟಿ ಕತ್ರಿನಾ ಕೈಫ್ ತೂಕದ ಕುರಿತು ಮಾಡಿದ್ದ ವಿವಾದಾತ್ಮಕ ಕಾಮೆಂಟ್ಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬದ ಗಣೇಶ ಉತ್ಸವದ ಸಮಾರಂಭದಲ್ಲಿ ಕತ್ರಿನಾ ಕೈಫ್ ಭಾಗವಹಿಸಿದ್ದರು. ಮಗು ಹುಟ್ಟಿದ ಬಳಿಕ ಸಹಜವಾಗಿಯೇ ಕತ್ರಿನಾ ಅವರ ದೇಹ ತೂಕ ಹೆಚ್ಚಾಗಿದೆ. ಇದನ್ನೇ ಮುಂದಿಟ್ಟುಕೊಂಡು ಆರ್ಜೆ ಎಜಾಜ್ ವಾರಿಸ್ ತಮ್ಮ ಕಾರ್ಯಕ್ರಮವೊಂದರಲ್ಲಿ ಅಪಹಾಸ್ಯ ಮಾಡಿ ಟ್ರೋಲ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗೂ ಗುರಿಯಾಗಿತ್ತು.
ಬಿಗ್ ಬಾಸ್ ರಿಯಾಲಿಟಿ ಶೋನ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಬಾಡಿ ಶೇಮಿಂಗ್ ವಿಚಾರವನ್ನು ಪ್ರಸ್ತಾಪಿಸಿದ ಸಲ್ಮಾನ್ ಖಾನ್, ದೇಹದ ಆಕಾರವನ್ನು ಗೇಲಿ ಮಾಡುವವರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದರು. ಅಲ್ಲದೆ, ತಮ್ಮ ಟೀ ಶರ್ಟ್ ಬಿಚ್ಚಿ ಕಟುಮಸ್ತಾದ ದೇಹವನ್ನು ಪ್ರದರ್ಶಿಸುವ ಮೂಲಕ ತಮ್ಮ ದೇಹದ ಬಗ್ಗೆ ಟ್ರೋಲ್ ಮಾಡುತ್ತಿದ್ದರವರಿಗೂ ಸಲ್ಮಾನ್ ಖಾನ್ ತಿರುಗೇಟು ನೀಡಿದರು. ಅಲ್ಲದೆ, ಟ್ರೋಲಿಗರಿಗೆ ನೇರ ಹಾಗೂ ಕಠಿಣ ಎಚ್ಚರಿಕೆ ನೀಡಿದ್ದು, ಎಜಾಜ್ ವಾರಿಸ್ ಅವರ ಕಣ್ಣು ತೆರೆಸುವಂತೆ ಮಾಡಿದೆ.
ಸಲ್ಮಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ನೋಡಿದ ಬಳಿಕ ತಮ್ಮ ತಪ್ಪಿನ ಅರಿವಾಯಿತು ಎಂದು ಸ್ಪಷ್ಟಪಡಿಸಿರುವ ಎಜಾಜ್, ಕೇವಲ ವಿಡಿಯೋಗಾಗಿ ಅಂದು ತಮಾಷೆ ಮಾಡಿದ್ದೆ ಹೊರತು ಯಾರನ್ನೂ ಅವಮಾನಿಸುವ ಉದ್ದೇಶವಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ತಮ್ಮ ಮಾತುಗಳು ಕತ್ರಿನಾ ಹಾಗೂ ಅವರ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಕತ್ರಿನಾ ಕೈಫ್ ಹಾಗೂ ಸಲ್ಮಾನ್ ಖಾನ್ ಬಳಿ ಹೃತ್ಪೂರ್ವಕ ಕ್ಷಮೆ ಕೋರಿದ್ದು, ಇನ್ನುಮುಂದೆ ಇಂತಹ ತಪ್ಪುಗಳು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿ ಕತ್ರಿನಾ ಮತ್ತು ಸಲ್ಮಾನ್ ಅವರ ಮುಂದಿನ ಜೀವನ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ, (ಏಜೆನ್ಸೀಸ್).