

ಬೆಂಗಳೂರು: ಕರೊನಾ ಹಾವಳಿಯಿಂದ ಚಿತ್ರಮಂದಿರಗಳು ಮುಚ್ಚಿರುವ ಈ ದಿನಗಳಲ್ಲಿ “ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರವನ್ನು ದೂರದ ಪಾಕಿಸ್ತಾನದಲ್ಲಿ ಅಭಿಮಾನಿಗಳು ಅಮೆಜಾನ್ ಪ್ರೈಂನಲ್ಲಿ ನೋಡಿ ಮೆಚ್ಚಿಕೊಂಡಿರುವುದು ವೈರಲ್ ಆಗಿದೆ. ಅರವತ್ನಾಲ್ಕು ದೇಶಗಳಲ್ಲಿ ಇಂಗ್ಗಿಷ್ ಸಬ್ ಟೈಟಲ್ ನೊಂದಿಗೆ ಈ ಚಿತ್ರ ಲಕ್ಷಾಂತರ ಪ್ರೇಕ್ಷಕರನ್ನು ಮುಟ್ಟಿದೆ. ಕರೊನಾದಿಂದ ಮನೆಯಲ್ಲಿರಬೇಕಾದ ಮಂದಿಗೆ ಮನೆಯಲ್ಲೇ ಉತ್ತಮ ರಂಜನೆ ನೀಡುತ್ತಿದೆ. ಹಿಂದಿಯೂ ಸೇರಿ ಇತರ ಭಾಷೆಗಳಿಗೆ ಡಬ್ ಮಾಡಿ ಓಟಿಟಿ ಮೂಲಕವೇ ಹೆಚ್ಚು ಜನರನ್ನು ತಲುಪಲು ನಿರ್ಮಾಪಕರು ಯೋಚಿಸುತ್ತಿದ್ದಾರೆ. ಅಪಾರ ಅಭಿಮಾನಿಗಳನ್ನುಳ್ಳ ಕಲಾವಿದರ ಚಿತ್ರಗಳನ್ನು ಹೊರತುಪಡಿಸಿ ಜನ ಥೇಟರಿಗೆ ಬರುವುದು ಅನುಮಾನ ಮೂಡಿಸಿರುವ ಈ ದಿನಗಳಲ್ಲಿ ಇದು ಆಶಾದಾಯಕ ಬೆಳವಣಿಗೆ ಎಂಬುದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ. ‘ಈ ಚಿತ್ರ ಮಾಡಿದ್ದು ಚಿತ್ರಮಂದಿರಗಳ ಭವ್ಯ ಮತ್ತು ವಿಶಾಲ ತೆರೆಗೆ. ಆದರೆ ಚಿತ್ರಮಂದಿರಕ್ಕೆ ಜನ ಬರುವುದು ಕ್ಷೀಣಿಸಿತ್ತು. ಸದಭಿರುಚಿಯ ಚಿತ್ರಗಳು ತಾಳ್ಮೆಯಿಂದ ಕಾಯ್ದರೆ ಭವಿಷ್ಯವಿದೆ ಎನ್ನುವುದಕ್ಕೆ ಈ ಚಿತ್ರದ ಯಶಸ್ಸು ಸಾಕ್ಷಿಯಾಗಿದೆ. ಇನ್ನು ಪ್ರಯೋಗಶೀಲರಿಗೆ ಓಟಿಟಿ ಮಾಧ್ಯಮ ಅನಿವಾರ್ಯವೇನೋ’ ಎನ್ನುತ್ತಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ. ಅಂದಹಾಗೆ ವಸಿಷ್ಟ ಸಿಂಹ, ಮಾನ್ವಿತಾ ಹರೀಶ್, ಅನಂತ್ ನಾಗ್ ಸೇರಿ ಅನೇಕ ಹಿರಿಯ ತಾರೆಯರು ಸಿನಿಮಾದಲ್ಲಿದ್ದಾರೆ.