ಕೋಟಿಗೊಬ್ಬ ಚಿತ್ರದ ವಿಷ್ಣು ನಟನೆ ಹೀಯಾಳಿಸಿದ ಅಜ್ಞಾನಿ ತಮಿಳು ಯೂಟ್ಯೂಬರ್: ಸಿಡಿದೆದ್ದ ಕನ್ನಡಿಗರು! Kotigobba

Kotigobba
Published on

Kotigobba : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಕೆಟ್ಟ ಟ್ರೆಂಡ್​ ಹುಟ್ಟಿಕೊಂಡಿದೆ. ಅದೇನೆಂದರೆ, ವೀವ್ಸ್​, ಲೈಕ್ಸ್​ ಮತ್ತು ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ಇನ್ನೊಬ್ಬರನ್ನು ನಿಂದಿಸುವುದು ಮತ್ತು ಹೀಯಾಳಿಸುವುದು. ಬೇರೆಯವರ ಮನಸ್ಸಿಗೆ ಎಷ್ಟು ಘಾಸಿಯಾಗುತ್ತದೆ ಎಂದು ಸ್ವಲ್ಪವೂ ಯೋಚಿಸದೇ ವಿವಾದ ಸೃಷ್ಟಿಸುವ ಉದ್ದೇಶದೊಂದಿಗೆ ಇನ್ನೊಬ್ಬರನ್ನು ನಿಂದಿಸುವ ಅಥವಾ ಅಣಕಿಸುವ ಈ ಕೆಟ್ಟ ಟ್ರೆಂಡ್​ಗೆ ಕಡಿವಾಣ ಬೀಳ ಬೇಕಿದೆ.

ತಾಜಾ ವಿವಾದ ಏನೆಂದರೆ, ಅಲ್ಪ ಜ್ಞಾನಿ ಅಥವಾ ಅಜ್ಞಾನಿ ತಮಿಳು ಯೂಟ್ಯೂಬರ್​ ಒಬ್ಬ ಕನ್ನಡಿಗರನ್ನು ಕೆಣಕಿದ್ದಾನೆ. ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವ, ದಿವಂಗತ ನಟ ಸಾಹಸಿಂಹ ಡಾ. ವಿಷ್ಣುವರ್ಧನ್ ಅವರನ್ನು ಅಣಕಿಸುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಯೂಟ್ಯೂಬರ್​ ಗುರಿಯಾಗಿದ್ದಾನೆ. ಸೂಪರ್​ ಸ್ಟಾರ್​ ರಜಿನಿಕಾಂತ್​ ಮತ್ತು ವಿಷ್ಣುವರ್ಧನ್​ ನಟನೆಯನ್ನು ಹೋಲಿಕೆ ಮಾಡಿ, ಟೀಕಿಸುವ ಮೂಲಕ ವಿವಾದ ಹುಟ್ಟು ಹಾಕಿದ್ದಾನೆ. ಇದನ್ನು ಬೇಕಂತಲೇ ಮಾಡಿದಂತಿದೆ. ಹೀಗಾಗಿ, ಕನ್ನಡಿಗರಲ್ಲಿ ಆಕ್ರೋಶ ಭುಗಿಲೆದ್ದಿದೆ.

ಏನಿದು ವಿವಾದ?

ರಜಿನಿಕಾಂತ್​ ಅಭಿನಯದ ಸೂಪರ್​ ಹಿಟ್​ ಭಾಷಾ ಸಿನಿಮಾವನ್ನು ಕನ್ನಡದಲ್ಲಿ ಕೋಟಿಗೊಬ್ಬ ಹೆಸರಿನಲ್ಲಿ ರಿಮೇಕ್​ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್​​ ಅವರ ನಟನೆ ಎಲ್ಲರ ಮನದಲ್ಲಿ ಇಂದಿಗೂ ಬೇರೂರಿದೆ. ಈ ಚಿತ್ರದಲ್ಲಿ ವಿಷ್ಣು ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ನಂಜುಂಡ (ಸಾಮಾನ್ಯ ಆಟೋ ಚಾಲಕ) ಮತ್ತು ಇನ್ನೊಂದು ಜಯಸಿಂಹ(ಮುಂಬೈ ಡಾನ್​) ನ ಪಾತ್ರ. ಎರಡರಲ್ಲೂ ತಮ್ಮ ಸ್ಟೈಲಿಶ್​ ನಟನೆಯ ಮೂಲಕ ವಿಷ್ಣು ಮನೆ ಮಾತಾಗಿದ್ದಾರೆ. ಈ ಸಿನಿಮಾ ಎಷ್ಟು ಹಿಟ್​ ಆಯಿತೆಂದರೆ, ಇದೇ ಹೆಸರಿನಲ್ಲಿ ನಟ ಸುದೀಪ್​ ಕೋಟಿಗೊಬ್ಬ 2 ಮತ್ತು 3 ಸರಣಿ ಮಾಡಿದರು. ಕೋಟಿಗೊಬ್ಬ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತು. ರಜಿನಿಗಿಂತ ವಿಷ್ಣು ನಟನೆಯೇ ಸಖತ್​ ಆಗಿದೆ ಎಂದು ಎಷ್ಟೋ ಮಂದಿ ಕೊಂಡಾಡಿದ್ದಾರೆ. ಆದರೆ, ಅಲ್ಪ ಜ್ಞಾನಿ ತಮಿಳು ಯೂಟ್ಯೂಬರ್​ ವಿಷ್ಣು ನಟನೆಯನ್ನು ಅಣಕಿಸಿದ್ದಾನೆ. ವಿಷ್ಣು ಈ ಸಿನಿಮಾದಲ್ಲಿ ಕಾಲಿನಿಂದಲೇ ವಿಲನ್​ನನ್ನು ಹಗ್ಗದಿಂದ ಕಟ್ಟಿಹಾಕುವ ದೃಶ್ಯ ಮತ್ತು ಸಿನಿಮಾದ ಮಧ್ಯದಲ್ಲಿ ಬೆಂಕಿಯಿಂದ ಸಿಂಹ ಹಾರಿಬಂದು ವಿಷ್ಣು ರೂಪ ಪಡೆಯುವ ಗ್ರಾಫಿಕ್ಸ್​ ಅನ್ನು ಟೀಕಿಸಿದ್ದಾನೆ. ಇದೀಗ ಈ ವಿಡಿಯೋ ವೈರಲ್​ ಆಗಿದ್ದು, ಕನ್ನಡಿಗರನ್ನು ಕೆರಳಿಸಿದೆ.

ಯೂಟ್ಯೂಬರ್ ಹೇಳಿದ್ದೇನು?

ಟೂಬ್​ಲೈಟ್​ಮೈಂಡ್​ ಟಾಮ್​ ವಿಜಯ್​ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಈ ವಿಡಿಯೋ ಅಪ್​ಲೋಡ್​ ಆಗಿದೆ. ವಿಡಿಯೋ ಆರಂಭದಲ್ಲಿ ತಮಿಳಿನಲ್ಲಿ ಮಾಡಿದ ಅತ್ಯುತ್ತಮ ಸಿನಿಮಾಗಳನ್ನು ರಿಮೇಕ್​ ಹೆಸರಿನಲ್ಲಿ ಹಾಳು ಮಾಡಿದ ಮೂರು ಸಿನಿಮಾಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ ಎಂದು ಯೂಟ್ಯೂಬರ್​ ಹೇಳಿದ್ದಾನೆ. ಮೊದಲನೆಯದಾಗಿ ಕನ್ನಡದ ಕೋಟಿಗೊಬ್ಬ ಸಿನಿಮಾ ಹೆಸರನ್ನು ತೆಗೆದುಕೊಂಡಿದ್ದಾನೆ. 1995ರಲ್ಲಿ ರಜಿನಿಕಾಂತ್​ ನಟನೆಯ ಭಾಷಾ ಸಿನಿಮಾವನ್ನು 2001ರಲ್ಲಿ ಕರ್ನಾಟಕದಲ್ಲಿ ಕೋಟಿಗೊಬ್ಬ ಹೆಸರಿನಲ್ಲಿ ರಿಮೇಕ್​ ಮಾಡಿದರು. ನಮ್ಮ ತಮಿಳಿನಲ್ಲಿ ರಜಿನಿಕಾಂತ್​ ವಿಲನ್​ರನ್ನು ಕಂಬಕ್ಕೆ ಕಟ್ಟಿಹಾಕಿ ಒಂದು ಡೈಲಾಗ್​ ಹೊಡೆಯುತ್ತಾರಲ್ಲ ಆ ಸೀನ್​ ಸಖತ್ತಾಗಿದೆ. ಆದರೆ, ಕನ್ನಡದಲ್ಲಿ ಕಾಲಿನಲ್ಲೇ ವಿಲನ್​ನನ್ನು ಹಗ್ಗದಿಂದ ಕಟ್ಟಿಹಾಕಿಬಿಡುತ್ತಾರೆ. ಅದು ಕೂಡ ಕಾಲಿನಲ್ಲೇ. ಬಳಿಕ ವಿಲನ್​ ಮೇಲೆ ಕಾಲಿಟ್ಟು, ನಾನು ಒಂದು ಸಾರಿ ಹೇಳುವುದು, ಅದರ ಮೇಲೆ ಹೇಳಲಾಗದು ಕಾಲು ನೋಯುತ್ತಿದೆ ಎಂದು ಹೇಳುವ ಮೂಲಕ ವಿಷ್ಣುವರ್ಧನ್​ ಡೈಲಾಗನ್ನೇ ತಿರುಚಿ ಟ್ರೋಲ್​ ಮಾಡಿದ್ದಾನೆ. ಆದರೆ, ವಾಸ್ತವವಾಗಿ ಸಿನಿಮಾದಲ್ಲಿ ವಿಷ್ಣು ಹೇಳುವ ಡೈಲಾಗೇ ಬೇರೆ ಇದೆ. ಅಲ್ಲದೆ, ವಯಸ್ಸಾದ ಕಾಲದಲ್ಲಿ ಇದೆಲ್ಲ ಬೇಕಾ ಎಂದು ಅಣಕಿಸಿದ್ದಾನೆ. ಫ್ಲ್ಯಾಶ್​ಬ್ಯಾಕ್​ನಲ್ಲಿ ಒಂದು ಸಿಂಹ ಬೆಂಕಿಯಿಂದ ಹಾರಿ ಬರುತ್ತದೆ. ಆ ಸಿಂಹ ಹೀರೋ ಆಗಿ ಬದಲಾಗುತ್ತದೆ. ಆ ರೀತಿ ವಿಎಫ್​ಎಕ್ಸ್​ ಮಾಡಿದ್ದಾರೆ. ಇದೆಲ್ಲ ನಿಮಗೆ ಅನ್ಯಾಯ ಅನಿಸುವುದಿಲ್ಲವೇ ಎಂದು ಟ್ರೋಲ್​ ಮಾಡಿ, ಕನ್ನಡಿಗರನ್ನು ಕೆಣಕಿದ್ದಾನೆ.

ಕನ್ನಡಿಗರ ಆಕ್ರೋಶ

ಕೋಟಿಗೊಬ್ಬ ಸಿನಿಮಾವನ್ನು ಅಣಕಿಸಿರುವ ತಮಿಳು ಯೂಟ್ಯೂಬರ್​ನ ವಿಡಿಯೋ ವೈರಲ್​ ಆಗುತ್ತಿದ್ದಂತೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಪದೇಪದೆ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿದ್ದಾರೆ. ಇದು ಸ್ವಲ್ಪವೂ ಸರಿಯಲ್ಲ. ಇತ್ತೀಚೆಗೆ ಕಮಲ್​ ಹಾಸನ್​ ಕೂಡ ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಇದೀಗ ಯೂಟ್ಯೂಬರ್​ ಕನ್ನಡದ ಮೇರು ನಟನನ್ನು ಹೀಯಾಳಿಸಿದ್ದಾನೆ. ಕನ್ನಡಿಗರ ತಂಟೆಗೆ ಬರಬೇಡಿ. ವೀವ್ಸ್​ ಹಾಗೂ ಲೈಕ್ಸ್​ಗಾಗಿ ಒಬ್ಬರನ್ನು ಹೀಯಾಳಿಸುವುದು ಎಷ್ಟು ಸರಿ. ನಿಮಗೆ ರಜಿನಿ ಲೆಂಜೆಂಡ್​ ಇರಬಹುದು, ನಮಗೆ ವಿಷ್ಣು ಕೂಡ ಲೆಜೆಂಡ್​. ಇಂಥಾ ನಟನ ಬಗ್ಗೆ ಮಾತನಾಡುವುದು ಸರಿಯಲ್ಲ. ನಿನ್ನ ಮನಸ್ಥಿತಿ ಎಷ್ಟೊಂದು ಕೆಳಮಟ್ಟದಲ್ಲಿದೆ ಅನ್ನೋದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ ಎಂದೆಲ್ಲ ಆಕ್ರೋಶ ಹಾಕಿದ್ದಾರೆ. ಅಲ್ಲದೆ, ಆತನ ದೂರು ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

ಹೆದರಿ ಕಾಮೆಂಟ್​ ಸೆಕ್ಸನ್​ ಆಫ್​

ಕನ್ನಡಿಗರ ಆಕ್ರೋಶಕ್ಕೆ ಹೆದರಿರುವ ತಮಿಳು ಯೂಟ್ಯೂಬರ್​​, ಕಾಮೆಂಟ್​ ಆಫ್​ ಮಾಡಿಕೊಂಡಿದ್ದಾನೆ. ಉಳಿದ ಎಲ್ಲ ವಿಡಿಯೋಗಳಿಗೆ ಕಾಮೆಂಟ್​ ಮಾಡಲು ಅವಕಾಶ ನೀಡಿರುವ ಯೂಟ್ಯೂಬರ್​ ಈ ಒಂದು ವಿಡಿಯೋಗೆ ಮಾತ್ರ ಕಾಮೆಂಟ್​ ಆಫ್​ ಮಾಡಿದ್ದಾನೆ. ಕನ್ನಡಿಗರ ಆಕ್ರೋಶಕ್ಕೆ ಬೆದರಿ ಈ ರೀತಿ ಮಾಡಿದ್ದು, ಮುಂದೆ ವಿಡಿಯೋ ಡಿಲೀಟ್​ ಮಾಡಿದರೂ ಅಚ್ಚರಿಪಡಬೇಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net