ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಊರಿಗೊಬ್ಬ ರಾಜ ಸಾಂಗ್​

Yuratna
Published on

ಬೆಂಗಳೂರು: ‘ಪವರ್​ಸ್ಟಾರ್’ ಪುನೀತ್ ರಾಜಕುಮಾರ್ ಕಳೆದೊಂದು ವಾರದಿಂದ ಅಭಿಮಾನಿಗಳಿಗೆ ಒಂದಿಲ್ಲೊಂದು ಸುದ್ದಿ ನೀಡುತ್ತಲೇ ಇದ್ದಾರೆ. ‘ಯುವರತ್ನ’ ಚಿತ್ರದ ‘ಊರಿಗೊಬ್ಬ ರಾಜ ...’ ಹಾಡು ಬಿಡುಗಡೆ ಆಗಿ ಸದ್ದು ಮಾಡುತ್ತಿದ್ದರೆ, ‘ಬಹದ್ದೂರ್’ ಚೇತನ್ ಜತೆಗೆ ಕಾಶ್ಮೀರದಲ್ಲಿ ‘ಜೇಮ್್ಸ’ ಜಮಾನಾ ಶುರುವಾಗಿದೆ. ಈ ನಡುವೆ ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ನಟಿಸಲಿದ್ದಾರೆ ಎಂಬ ಸುದ್ದಿಯೂ ಅಷ್ಟೇ ಸೌಂಡು ಮಾಡುತ್ತಿದೆ.

ಏಪ್ರಿಲ್ 1ರಂದು ‘ಯುವರತ್ನ’ ಸಿನಿಮಾ ಕನ್ನಡದ ಜತೆಗೆ ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಇನ್ನೊಂದು ತಿಂಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ಪ್ರಮೋಷನ್ ಕೆಲಸದಲ್ಲಿ ಸಕ್ರಿಯರಾಗಿರುವ ಹೊಂಬಾಳೆ ನಿರ್ಮಾಣ ಸಂಸ್ಥೆ ಒಂದಿಲ್ಲೊಂದು ವಿಶೇಷತೆಗಳ ಜತೆಗೆ ಆಗಮಿಸುತ್ತಿದೆ. ಅದರಂತೆ ಎಸ್. ಥಮನ್ ಸಂಗೀತ ನೀಡಿರುವ ‘ಊರಿಗೊಬ್ಬ ರಾಜ ...’ ಹಾಡು ಯೂಟ್ಯೂಬ್​ನಲ್ಲಿ ಹಿಟ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಹಾಡಿನಲ್ಲಿ ಪುನೀತ್ ಅವರ ಡಾನ್ಸ್ ಅಷ್ಟೇ ಮನಮೋಹಕವಾಗಿದೆ.

‘ಯುವರತ್ನ’ ಒಂದು ಬದಿಯಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚೇತನ್ ನಿರ್ದೇಶನದ ‘ಜೇಮ್್ಸ’ ಚಿತ್ರತಂಡ ಸುಮ್ಮನೇ ಕುಳಿತಿಲ್ಲ. ಶೂಟಿಂಗ್ ಹಂತದಲ್ಲಿಯೇ ಬಗೆಬಗೆ ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರನ್ನು ಸೆಳೆಯುತ್ತಿದೆ. ಅದರಲ್ಲೂ ಆರ್ವಿು ಆಫೀಸರ್ ಅವತಾರದಲ್ಲಿ ಪುನೀತ್ ಲುಕ್ ಬಹಿರಂಗವಾಗಿದ್ದು, ಚಿತ್ರದ ಬಗೆಗಿನ ಕುತೂಹಲವನ್ನು ಹೆಚ್ಚಿಸುತ್ತಿದೆ. ಈಗಾಗಲೇ ಚಿತ್ರದ ಶೇ. 60ರಷ್ಟು ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ಚಿತ್ರತಂಡ ಕಾಶ್ಮೀರದಿಂದ ವಾಪಸ್ಸಾಗಲಿದೆ. ಅಂದಹಾಗೆ, ‘ರಾಜ್​ಕುಮಾರ’ ಚಿತ್ರದ ಬಳಿಕ ಪ್ರಿಯಾ ಆನಂದ್ ಮತ್ತೊಮ್ಮೆ ಪುನೀತ್ ಜತೆ ಕೈ ಜೋಡಿಸಿದ್ದಾರೆ.

ದಿನಕರ್ ಜತೆ ಪುನೀತ್ ಸಿನಿಮಾ

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್, ‘ಲೈಫ್ ಜತೆ ಒಂದ್ ಸೆಲ್ಪಿ’ ನಂತರ ಇದೀಗ ಸದ್ದಿಲ್ಲದೆ ಪುನೀತ್ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಲಾಕ್​ಡೌನ್ ಅವಧಿಯಲ್ಲಿ ಪುನೀತ್ ಸಲುವಾಗಿಯೇ ಕಥೆ ಹೆಣೆದಿರುವ ದಿನಕರ್, ಅವರಿಂದಲೂ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರಂತೆ. ಸದ್ಯ ‘ಯುವರತ್ನ’ ಚಿತ್ರದ ಬಿಡುಗಡೆ ಮತ್ತು ‘ಜೇಮ್್ಸ’ ಶೂಟಿಂಗ್​ನಲ್ಲಿ ಪುನೀತ್ ಬಿಜಿಯಾಗಿದ್ದಾರೆ. ಹಾಗಾಗಿ ಶೀರ್ಷಿಕೆ ಮತ್ತು ಇನ್ನುಳಿದ ಮಾಹಿತಿಯ ಜತೆಗೆ ಶೀಘ್ರದಲ್ಲಿ ಆಗಮಿಸಲಿದ್ದಾರಂತೆ ದಿನಕರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net