

ಬೆಂಗಳೂರು: ಕನ್ನಡದಲ್ಲಿ ಆಲ್ಬಂ ಸಾಂಗ್ಗಳು ಸ್ವಲ್ಪ ಜಾಸ್ತಿಯೇ ಸದ್ದು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವು ಆಲ್ಬಂ ಹಾಡುಗಳು ಬಿಡುಗಡೆಯಾಗಿದ್ದು, ಈಗ ಆ ಸಾಲಿಗೆ ಇನ್ನೊಂದು ಹೊಸ ಹಾಡು ಸೇರ್ಪಡೆಯಾಗಿದೆ. ಅದೇ 'ನೆನಪಿನ ಹಾದಿಯಲಿ ಒಂಟಿ ಪಯಣ'.
ಈ ಹಿಂದೆ ಸಂಚಾರಿ ವಿಜಯ್ ಅಭಿನಯದ '6 ನೇ ಮೈಲಿ" ಹಾಗೂ ವಸಿಷ್ಠ ಸಿಂಹ ಅಭಿನಯದ 'ತಲ್ವಾರ್ ಪೇಟೆ' ಚಿತ್ರಗಳನ್ನು ನಿರ್ಮಿಸಿರುವ ಡಾ. ಶೈಲೇಶ್ ಕುಮಾರ್ ಈ ಹಾಡನ್ನು ನಿರ್ಮಿಸಿದ್ದು, ತಮ್ಮದೇ ಎಸ್.ಎನ್.ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡಿದ್ದಾರೆ.
ಡಾ. ಶಶಿಕಲಾ ಪುಟ್ಟಸ್ವಾಮಿ ಈ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ. ವಿಜಯಪ್ರಕಾಶ್ ಈ ಹಾಡನ್ನು ಹಾಡಿದ್ದು, ಪ್ರವೀಣ್ ತೇಜ್ ಹಾಗೂ ಯಶಾ ಶಿವಕುಮಾರ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಸಾಯಿ ಶ್ರೀಕಿರಣ್ ಸಂಗೀತ ಮತ್ತು ಚಂದ್ರಶೇಖರ್ ಛಾಯಾಗ್ರಹಣ ಈ ಹಾಡಿಗಿದೆ.
'ಶಶಿಕಲಾ ಅವರು ಬರೆದಿರುವ ಈ ಹಾಡು ಸುಂದರವಾಗಿದೆ. ಅಷ್ಟೇ ಚೆನ್ನಾಗಿ ನಿರ್ದೇಶನ ಕೂಡ ಮಾಡಿದ್ದಾರೆ. ಇಡೀ ತಂಡದ ಪರಿಶ್ರಮದಿಂದ ಹಾಡು ಚೆನ್ನಾಗಿ ಬಂದಿದೆ' ಎಂದು ನಟ ಪ್ರವೀಣ್ ತೇಜ್ ಹೇಳಿದರೆ, 'ಇದು ನನ್ನ ಮೊದಲ ಆಲ್ಬಂ ಸಾಂಗ್. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ' ಎಂದು ಯಶಾ ಹೇಳಿಕೊಂಡರು.