ಚಿರು ಸರ್ಜಾ ನೆನಪಲ್ಲಿ ಒಂದು ವರ್ಷ...

Chiru
Published on

ಬೆಂಗಳೂರು: ಚಿರಂಜೀವಿ ಸರ್ಜಾ ಇಲ್ಲವಾಗಿ ಜೂ. 7ಕ್ಕೆ ಸರಿಯಾಗಿ ವರ್ಷವಾಯಿತು. ಆ ಒಂದು ನೆನಪಲ್ಲಿಯೇ ಇಡೀ ಕುಟುಂಬ ಸೋಮವಾರ ಚಿರು ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದೆ. ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್​​ಹೌಸ್​ನಲ್ಲಿ ಚಿರು ಸರ್ಜಾ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಅದೇ ಸ್ಥಳಕ್ಕೆ ಧ್ರುವ ಸರ್ಜಾ, ಮೇಘನಾ ರಾಜ್, ಪ್ರಮೀಳಾ ಜೋಷಾಯ್, ಸುಂದರ್ ರಾಜ್ ಸೇರಿ ಹಲವರು ತೆರಳಿ ವಿಧಿವಿಧಾನ ನೆರವೇರಿಸಿದರು. ಜ್ಯೂನಿಯರ್ ಚಿರು ಸಹ ಈ ಕಾರ್ಯದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಅಭಿಮಾನಿಗಳಿಗೆ ಇರಲಿಲ್ಲ ಅವಕಾಶ: ಲಾಕ್​ಡೌನ್ ಹಿನ್ನೆಲೆಯಲ್ಲಿ ಸರಳವಾಗಿಯೇ ಮನೆಮಂದಿ ಮತ್ತು ಕೆಲ ಸ್ನೇಹಿತರ ಸಮ್ಮುಖದಲ್ಲಿ ಚಿರು ಮೊದಲ ವರ್ಷದ ಪುಣ್ಯತಿಥಿ ಕಾರ್ಯ ನೆರವೇರಿದೆ. ಲಾಕ್​ಡೌನ್ ಇದ್ದಿದ್ದರಿಂದ ಫಾರ್ಮ್​ ಹೌಸ್ ಒಳಗೆ ಬೇರಾರಿಗೂ ಅವಕಾಶ ಇರಲಿಲ್ಲ. ಇನ್ನು, ಚಿತ್ರೀಕರಣಕ್ಕೆ ಹೋಗಿದ್ದ ಮಾಧ್ಯಮದವರ ಮೇಲೆ ಧ್ರುವ ಸರ್ಜಾ ಅವರ ಬಾಡಿಗಾರ್ಡ್ ಹಲ್ಲೆ ಮಾಡಿದ್ದಾರೆ.

ಸರ್ಜಾ ಕುಟುಂಬದಿಂದ ಪತ್ರ: ಚಿರಂಜೀವಿ ಸರ್ಜಾ ಅವರ ಕುಟುಂಬದವರು, ‘ನಮ್ಮ ಹೃದಯದ ಚಿರಂಜೀವಿ. ನೀನು ದೇವರ ಮನೆಗೆ ಹೋಗಿ ಒಂದು ವರ್ಷವಾಯಿತು. ಎಷ್ಟು ಬೇಗ ಒಂದು ವರ್ಷ. ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳಿಲ್ಲ. ಕನಸಿನಲ್ಲಿ ಕಾಣದ ರಾತ್ರಿಗಳಿಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನರಿಗೆ ನೀನು ತೋರಿಸುತ್ತಿದ್ದ ಪ್ರೀತಿ, ಪ್ರೇಮ ಉದಾರ ಗುಣ ಮತ್ತು ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾಗದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದಿರಬೇಕು. ಆ ಪ್ರಾರ್ಥನೆಯಲ್ಲಿಯೇ, ಎಂದೆಂದೂ ನಿನ್ನ ನೆನಪಲ್ಲಿ ... ನಿನ್ನ ಪ್ರೀತಿಯ ಕುಟುಂಬ ...’ ಎಂದು ಪತ್ರದ ಮೂಲಕ ಮತ್ತೆ ಚಿರುವನ್ನು ನೆನಪು ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net