

ಕೋವಿಡ್ನ ಮೊದಲನೆಯ ಅಲೆ, ಎರಡನೆಯ ಅಲೆ ತಡೆಯುವುದಕ್ಕಾಗಿ ಜಾರಿಗೊಳಿಸಿದ್ದ ಲಾಕ್ಡೌನ್ ಕಾರಣ ಉದ್ಯೋಗ ನಷ್ಟ, ಆದಾಯ ನಷ್ಟ, ಉತ್ಪಾದನೆ ನಷ್ಟ ಸೇರಿ ಅರ್ಥವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವಾಗಿದೆ. ಬಹುತೇಕ ಎಲ್ಲ ರಾಷ್ಟ್ರಗಳೂ ವಿತ್ತೀಯ ಕೊರತೆ ಎದುರಿಸುತ್ತಿವೆ. ಆದಾಗ್ಯೂ, ಭಾರತದಲ್ಲಿ ಕರೊನಾದ ಎರಡು ಅಲೆಗಳ ಬಳಿಕವೂ ಅರ್ಥವ್ಯವಸ್ಥೆ ಚೇತರಿಕೆಯ ಲಕ್ಷಣಗಳನ್ನು ತೋರುತ್ತಿರುವುದು ಆಶಾದಾಯಕ ಬೆಳವಣಿಗೆ. ಇದೇ ವೇಳೆ, ಅರ್ಥವ್ಯವಸ್ಥೆಯ ಪುನಶ್ಚೇತನಕ್ಕಾಗಿ ಮನಿ ಪ್ರಿಂಟಿಂಗ್, ಡೆಟ್ ಮಾನೆಟೈಸೇಶನ್, ಡೈರೆಕ್ಟ್ ಮಾನೆಟೈಸೇಶನ್ ಮುಂತಾದ ವಿಚಾರಗಳು ಚರ್ಚೆಯಲ್ಲಿವೆ. ಅರ್ಥವ್ಯವಸ್ಥೆ ಪುನಶ್ಚೇತನಕ್ಕೆ ಇವುಗಳು ಸುಲಭ ಪರಿಹಾರ ಒದಗಿಸಬಲ್ಲವು ಎಂಬ ವಾದ ಇರುವಂತೆಯೇ, ಇದು ಕೊನೆಯ ಆಯ್ಕೆಯಾಗಬೇಕೆಂಬ ಎಚ್ಚರಿಕೆಯನ್ನೂ ತಜ್ಞರು ಕೊಡುತ್ತಿದ್ದಾರೆ. ಕೋವಿಡ್ ಸಂಕಷ್ಟದ ಕಾರಣ ಕುಸಿದ ಅರ್ಥವ್ಯವಸ್ಥೆಗೆ ಪುನಶ್ಚೇತನ ಒದಗಿಸುವುದಕ್ಕಾಗಿ ಜಗತ್ತಿನಾದ್ಯಂತ ಎಲ್ಲ ಸರ್ಕಾರಗಳು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ನಡೆಸಿವೆ. ವಿವಿಧ ಕ್ಷೇತ್ರಗಳ ಸುಧಾರಣೆಗಾಗಿ ವಿಭಿನ್ನ ರೀತಿಯ ಆರ್ಥಿಕ ಪ್ಯಾಕೇಜ್ಗಳನ್ನು ಘೋಷಿಸಿವೆ. ತೆರಿಗೆ ರಜೆ, ತೆರಿಗೆ ವಿನಾಯಿತಿ, ಸಬ್ಸಿಡಿ ಮತ್ತು ಇತರ ಪರಿಹಾರ ಉಪ್ರಕಮಗಳನ್ನೂ ಜಾರಿಗೊಳಿಸಿವೆ. ಸರಳವಾಗಿ ಹೇಳಬೇಕು ಎಂದರೆ ಸರ್ಕಾರಗಳು ಎರಡು ಮೂಲತತ್ತ್ವಗಳ ವಿಧಾನದ ಮೂಲಕ ಅಂದರೆ ಸಾಲ ಪಡೆಯುವುದು ಅಥವಾ ತೆರಿಗೆ ಹೆಚ್ಚಿಸುವುದರ ಮೂಲಕ ಅವುಗಳ ವಿತ್ತೀಯ ಕೊರತೆ ಸರಿದೂಗಿಸಲು ಪ್ರಯತ್ನಿಸಿವೆ. ಇವಕ್ಕೆ ಹೊರತಾಗಿ ಸರ್ಕಾರಗಳ ಎದುರು 3ನೇ ಆಯ್ಕೆಯೊಂದು ಲಭ್ಯವಿದ್ದು, ಆಯಾ ರಾಷ್ಟ್ರಗಳ ಅರ್ಥವ್ಯವಸ್ಥೆಗೆ ಅನುಗುಣವಾಗಿ ಇದನ್ನು ಮನಿ ಪ್ರಿಂಟಿಂಗ್, ಡೆಟ್ ಮಾನೆಟೈಸೇಶನ್, ಡೈರೆಕ್ಟ್ ಮಾನೆಟೈಸೇಶನ್ ಎನ್ನುತ್ತಾರೆ.
ಮನಿ ಪ್ರಿಂಟಿಂಗ್: ಪ್ರಿಂಟಿಂಗ್ ಮೂಲಕ ಸರ್ಕಾರ ಹೇಗೆ ಹಣ ಗಳಿಸಬಹುದು? ಇದು ಮಾನೆಟೈಸೇಶನ್ಗೆ ಸರ್ಕಾರಗಳು ಬಳಸುವ ಅಸಾಂಪ್ರದಾಯಿಕವಾದ ಮೂರನೇ ಪರ್ಯಾಯ ವಿಧಾನವಾಗಿದೆ. ಯಾವಾಗ ಸೆಂಟ್ರಲ್ ಬ್ಯಾಂಕ್ ಸರ್ಕಾರದಿಂದ ನೇರವಾಗಿ ಬಾಂಡ್ಗಳನ್ನು ಖರೀದಿಸುತ್ತದೆಯೋ ಆಗ ಮಾನೆಟೈಸೇಶನ್ ಪ್ರಕ್ರಿಯೆ ನಡೆಯುತ್ತದೆ. ಇದನ್ನು ‘ಮನಿ ಪ್ರಿಂಟಿಂಗ್’ ಎಂದು ಹೇಳುತ್ತಾರೆ. ಸಹಜ ಜಿಡಿಪಿ ಏರಿಕೆಯಾಗದೆಯೇ ಹೊಸ ಹಣ ಸೃಷ್ಟಿ (ಅರ್ಥಾತ್ ಬ್ಯಾಂಕ್ ನೋಟುಗಳು ಎಂಬುದು ಇದರ ಅರ್ಥವಲ್ಲ)ಯಾಗುತ್ತದೆ.
ಮಾನೆಟೈಸೇಷನ್ ಎಂದರೆ..: ಆರ್ಥಿಕ ಪರಿಭಾಷೆಯಲ್ಲಿ ಮಾನೆಟೈಸೇಷನ್ ಎಂದರೆ ಹಣಗಳಿಕೆ ಎಂಬ ಅರ್ಥವಿದೆಯಾದರೂ, ಏನನ್ನಾದರೂ ಹಣವನ್ನಾಗಿ ಪರಿವರ್ತಿಸುವುದು ಎಂಬ ವಿಶಾಲ ಅರ್ಥವನ್ನು ಇದು ಹೊಂದಿದೆ. ಕರೊನಾ ಸಂಕಷ್ಟಕ್ಕೂ ಮೊದಲೇ ಮಾಡರ್ನ್ ಮಾನೆಟರಿ ಥಿಯರಿ ಅಮೆರಿಕದಲ್ಲಿ ಹೆಚ್ಚು ಚರ್ಚೆಗೊಳಗಾಯಿತು. ಅಲ್ಲಿ ಎಡಪಂಥೀಯ ರಾಜಕಾರಣಿಗಳು ಇದನ್ನು ಬೆಂಬಲಿಸಿದ್ದರು. ಭಾರತದಲ್ಲೂ ಮಾಜಿ ವಿತ್ತಸಚಿವರು, ಆರ್ಬಿಐನ ಮಾಜಿ ಗವರ್ನರ್ಗಳ ಪೈಕಿ ಕೆಲವರು ಮನಿ ಪ್ರಿಂಟಿಂಗ್ ಮೂಲಕ ಮಾನೆಟೈಸೇಶನ್ ಮಾಡುವುದನ್ನು ಬೆಂಬಲಿಸಿದ್ದಾರೆ.
ಡೈರೆಕ್ಟ್ ಮಾನೆಟೈಸೇಷನ್: ಕೇಂದ್ರ ಸರ್ಕಾರ ಮತ್ತು ಆರ್ಬಿಐ ನಡುವೆ ನೇರ ವ್ಯವಹಾರ (ಹಣಕಾಸು ವ್ಯವಸ್ಥೆಯನ್ನು ಬೈಪಾಸ್ ಮಾಡುವಂತಹ) ಊಹಿಸಿಕೊಳ್ಳಿ. ಈ ಸನ್ನಿವೇಶದಲ್ಲಿ ಸರ್ಕಾರ ಹೊಸ ಬಾಂಡ್ಗಳನ್ನು ಆರ್ಬಿಐಗೆ ನೀಡಿ ಹೊಸ ಕರೆನ್ಸಿ ಮುದ್ರಿಸುವುದಕ್ಕೆ ಸೂಚಿಸುತ್ತದೆ. ಆರ್ಬಿಐ ಅದನ್ನು ಪಾಲಿಸಿ ಹಣವನ್ನು ಕೇಂದ್ರ ಸರ್ಕಾರಕ್ಕೆ ಒದಗಿಸುತ್ತದೆ. ಸರ್ಕಾರ ಇದನ್ನು ದೇಶದ ಆರ್ಥಿಕ ಪುನಶ್ಚೇತನಕ್ಕೆ ಬಳಸುತ್ತದೆ. ಮತ್ತು ನಿಗದಿತ ಗಡುವಿನಲ್ಲಿ ಹಣವನ್ನು ಹಿಂದಿರುಗಿಸಿ ಬಾಂಡ್ಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುತ್ತದೆ ಎಂದಾದರೆ ಇಂತಹ ಪ್ರಕ್ರಿಯೆಯನ್ನು ಡೈರೆಕ್ಟ್ ಮಾನೆಟೈಸೇಷನ್ ಎನ್ನುತ್ತಾರೆ.
ಇನ್ಡೈರೆಕ್ಟ್ ಮಾನೆಟೈಸೇಷನ್: ಅರ್ಥವ್ಯವಸ್ಥೆ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸದ್ಯ ಪಾಲಿಸುತ್ತಿರುವ ವಿಧಾನವೇ ಇನ್ಡೈರೆಕ್ಟ್ ಮಾನೆಟೈಸೇಷನ್. ಇಲ್ಲಿ ಆರ್ಬಿಐ ಓಪನ್ ಮಾರ್ಕೆಟ್ ಆಪ ರೇಷನ್ಸ್ ಮೂಲಕ ಅಥವಾ ಸೆಕೆಂಡರಿ ಮಾರ್ಕೆಟ್ನಿಂದ ಸರ್ಕಾರದ ಬಾಂಡ್ಗಳನ್ನು ಖರೀದಿಸುತ್ತದೆ. ಆ ಮೂಲಕ ಸರ್ಕಾರದ ಖರ್ಚುವೆಚ್ಚಗಳಿಗೆ ಹಣ ಲಭ್ಯವಾಗುವಂತೆ ಮಾಡುತ್ತದೆ.
ಡೆಟ್ ಮಾನೆಟೈಸೇಷನ್: ಸರ್ಕಾರ ತನ್ನ ಆದಾಯ ಮೀರಿ ಖರ್ಚು ಮಾಡತೊಡಗಿದಾಗ ಉಂಟಾಗುವ ಹಣಕಾಸಿನ ಕೊರತೆಯನ್ನೇ ಹಣಕಾಸಿನ ಮೂಲವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗೆ ‘ಡೆಟ್ ಮಾನೆಟೈಸೇಷನ್’ ಎಂದು ಹೇಳುತ್ತಾರೆ. ಸರ್ಕಾರದ ಇಂತಹ ಹೆಚ್ಚುವರಿ ಖರ್ಚುಗಳನ್ನು ಹಣಕಾಸಿನ ಮೂಲವನ್ನಾಗಿ ಪರಿ ವರ್ತಿಸಲು ಸರ್ಕಾರದ ಬಾಂಡ್ಗಳನ್ನು ಸೆಂಟ್ರಲ್ ಬ್ಯಾಂಕ್ ಖರೀದಿಸುತ್ತದೆ. ಈ ಬಾಂಡ್ಗಳನ್ನು ಮೆಚ್ಯುರಿಟಿ ತನಕ ಇರಿಸಿ ಕೊಂಡು ಬಳಿಕ ನಿಶ್ಚಿತ ಬಡ್ಡಿಸಹಿತ ಹಿಂದಿರುಗಿಸುತ್ತದೆ. ಈ ರೀತಿ ಡೆಟ್ ಮಾನೆಟೈಸೇಶನ್ ಮುಂದುವರಿದ ರಾಷ್ಟ್ರಗಳಾದ ಅಮೆರಿಕ (108%), ಬ್ರಿಟನ್ (81%), ಜಪಾನ್ (237%)ಗಳಲ್ಲಿ ಕಂಡುಬರುತ್ತದೆ.
ಇತಿಹಾಸದ ಹಾದಿ: ಸರ್ಕಾರದ ವಿತ್ತೀಯ ಕೊರತೆಯನ್ನು 1997ರ ತನಕ ಆರ್ಬಿಐ ತನ್ನಿಂತಾನೇ ಮಾನೆಟೈಸ್ ಮಾಡುತ್ತಿತ್ತು. 1994ರಲ್ಲಿ ಡಾ.ಮನಮೋಹನ್ ಸಿಂಗ್ (ಅಂದಿನ ಹಣಕಾಸು ಸಚಿವರು) ಮತ್ತು ಅಂದು ಆರ್ಬಿಐ ಗವರ್ನರ್ ಸಿ.ರಂಗರಾಜನ್ ಡೈರೆಕ್ಟ್ ಮಾನೆಟೈ ಸೇಶನ್ ಸೌಲಭ್ಯವನ್ನು 1997ರಲ್ಲಿ ಕೊನೆಗೊಳಿಸುವ ನಿರ್ಧಾರ ತೆಗೆದು ಕೊಂಡರು.