ಒಂದು ವಾರ ಚಿತ್ರ ಪ್ರದರ್ಶನ ಸ್ತಬ್ಧ: ಚಿತ್ರೀಕರಣಕ್ಕೆ ಯಾವುದೇ ಸಮಸ್ಯೆ ಇಲ್ಲ

PVR
Published on

ಕಳೆದ ಮೂರ್ನಾಲ್ಕು ದಿನಗಳಿಂದ ಇಂಥದ್ದೊಂದು ಅನುಮಾನ ಇದ್ದೇ ಇತ್ತು. ಕರೊನಾ ಮಹಾಮಾರಿ ಹಬ್ಬುವುದನ್ನು ತಡೆಗಟ್ಟಲು ಇತ್ತೀಚೆಗೆ ಕೇರಳ ಸರ್ಕಾರವು ಚಲನಚಿತ್ರ ಪ್ರದರ್ಶನವನ್ನು ಮಾರ್ಚ್ 31ರವರೆಗೂ ರದ್ದು ಮಾಡಿತ್ತು. ಕೇರಳದಲ್ಲಿ ಚಿತ್ರ ಪ್ರದರ್ಶನ ರದ್ದಾದ ಹಿನ್ನೆಲೆಯಲ್ಲೇ, ಕರ್ನಾಟಕದಲ್ಲೂ ಇಂಥದ್ದೊಂದು ಬೆಳವಣಿಗೆ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅದೀಗ ನಿಜವಾಗಿದೆ. ಇಂದಿನಿಂದ ಕರ್ನಾಟಕದಲ್ಲೂ ಎಲ್ಲಾ ಚಿತ್ರಮಂದಿರಗಳು ಒಂದು ವಾರ ಬಂದ್ ಆಗಲಿವೆ.

ಕರೊನಾ ವೈರಸ್​ನ ಪ್ರಭಾವ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಆಗಿದೆ. ಇದಕ್ಕೂ ಮುನ್ನ ಕೆಲವು ಚಿತ್ರತಂಡಗಳು ಹೊರದೇಶಗಳಿಗೆ ಚಿತ್ರೀಕರಣಕ್ಕೆ ಹೋಗಬೇಕಿದ್ದು, ಕರೋನಾ ಕಾರಣದಿಂದ ಚಿತ್ರೀಕರಣವನ್ನು ಮುಂದಕ್ಕೆ ಹಾಕಿವೆ. ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’, ಪುನೀತ್ ಅಭಿನಯದ ‘ಯುವರತ್ನ’ ಮತ್ತು ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರಗಳು ವಿದೇಶದಲ್ಲಿ ಹಾಡಿನ ಚಿತ್ರೀಕರಣಕ್ಕೆ ಹೋಗಬೇಕಾಗಿತ್ತು. ಕರೋನಾ ಭೀತಿಯಿಂದ ‘ಯುವರತ್ನ’ ಮತ್ತು ‘ಗಾಳಿಪಟ 2’ ಚಿತ್ರತಂಡಗಳು ಚಿತ್ರೀಕರಣವನ್ನು ಮುಂದೂಡಿದರೆ, ‘ರಾಬರ್ಟ್’ ಚಿತ್ರದ ಹಾಡಿನ ಚಿತ್ರೀಕರಣ ಗುಜರಾತಿನಲ್ಲಿ ಮುಗಿಸಲಾಗಿದೆ. ಈ ಸಮಸ್ಯೆ ಬೇರೆ ದೇಶಗಳಿಗೆ ಹೋಗುವ ಚಿತ್ರತಂಡಗಳಿಗೆ ಮಾತ್ರ ಎದುರಾಗಿದ್ದು, ಮಿಕ್ಕಂತೆ ಉಪೇಂದ್ರ ಅಭಿನಯದ ‘ಕಬ್ಜ’ ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣ ಕರ್ನಾಟಕದಲ್ಲಿ ಅವ್ಯಾಹತವಾಗಿ ಸಾಗಿದೆ.

ಕರೊನಾ ವೈರಸ್ ಭೀತಿ ಚಿತ್ರೀಕರಣ ಚಟುವಟಿಕೆಗಳಲ್ಲಿ ಅಷ್ಟೇನೂ ವ್ಯತ್ಯಾಸವಾಗಿದ್ದರೂ, ಚಿತ್ರ ಪ್ರದರ್ಶನದ ಮೇಲೆ ಗಾಢವಾಗಿ ಪರಿಣಾಮ ಬೀರಿದೆ. ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ, ಜನಸಾಮಾನ್ಯರು ಸಿನಿಮಾ ನೋಡುವುದನ್ನು ಕಳೆದ ಕೆಲವು ದಿನಗಳಲ್ಲಿ ಸಾಕಷ್ಟು ಕಡಿಮೆಯಾಗಿದ್ದು ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಭಣಗುಡುತ್ತಿವೆ. ಇದರ ಮಧ್ಯೆಯೂ ಶುಕ್ರವಾರ ಐದು ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದು, ಬಂದ್​ನ ಪರಿಣಾಮ ಆ ಚಿತ್ರಗಳ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಸರ್ಕಾರ ಆದೇಶವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಸ್ವಾಗತಿಸಿದ್ದಾರೆ. ‘ಸರ್ಕಾರ ಒಂದು ವಾರ ಚಿತ್ರಮಂದಿರಗಳನ್ನು ಬಂದ್ ಮಾಡಲು ತಿಳಿಸಿದೆ. ಒಂದು ವಾರದ ನಂತರ ಮತ್ತೆ ಸರ್ಕಾರಕ್ಕೆ ತಿಳಿಸಿ ಚಿತ್ರಮಂದಿರಗಳನ್ನು ತೆರೆಯುತ್ತೇವೆ. ಮತ್ತೆ ಚಿತ್ರಮಂದಿರ ತೆರೆದಾಗ ಮೊದಲ ಆದ್ಯತೆಯನ್ನು ಶುಕ್ರವಾರ ಬಿಡುಗಡೆಯಾಗಿರುವ ಸಿನಿಮಾಗಳಿಗೆ ನೀಡುತ್ತೇವೆ. ಈ ಬಗ್ಗೆ ನಾನು ಎಲ್ಲ ಪ್ರದರ್ಶಕರು ಮತ್ತು ವಿತರಕರಿಗೆ ಕರೆದು ಮಾತನಾಡುತ್ತೇನೆ’ ಎಂದು ಹೇಳುತ್ತಾರೆ.

ಈ ಕುರಿತು ಮಾತನಾಡುವ ಕನ್ನಡ ಚಲನಚಿತ್ರ ನಿರ್ವಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ‘ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಇದರಿಂದ ಶುಕ್ರವಾರ ಬಿಡುಗಡೆಯಾದ ಚಿತ್ರಗಳಿಗೆ ಸಮಸ್ಯೆ ಎದುರಾಗುತ್ತದೆ. ಆ ನಿರ್ವಪಕರಿಗೆ ನಾವು ಮೊದಲೇ ಎಚ್ಚರಿಸಿದ್ದೆವು. ಅವರು ಹಲವು ಕಾರಣಗಳಿಂದಾಗಿ ಚಿತ್ರ ಬಿಡುಗಡೆ ಮಾಡಲೇಬೇಕು ಎಂದು ಬಿಡುಗಡೆ ಮಾಡಿದರು. ಇನ್ನು ಬರೀ ಚಿತ್ರ ಪ್ರದರ್ಶನ ನಿಲ್ಲಿಸಲು ಮಾತ್ರ ಆದೇಶವಾಗಿದೆ. ಚಿತ್ರೀಕರಣ ಯಥಾ ಸ್ಥಿತಿ ನಡೆಯುತ್ತದೆ’ ಎನ್ನುತ್ತಾರೆ.

ಸರ್ಕಾರದ ಆದೇಶ ಪಾಲಿಸುತ್ತೇವೆ

ಸದ್ಯ ಮುಖ್ಯಮಂತ್ರಿಗಳು ಹೇಳಿರುವ ಪ್ರಕಾರ, ನಾವು ಚಿತ್ರಮಂದಿರಗಳನ್ನು ಒಂದು ವಾರ ಬಂದ್ ಮಾಡುತ್ತಿದ್ದೇವೆ. ಇದರ ಬಗ್ಗೆ ಬುಕ್ ಮೈ ಶೋ ಸೇರಿದಂತೆ ಎಲ್ಲರೂ ಎಚ್ಚರ ವಹಿಸಬೇಕು. ಈಗ ಪ್ರದರ್ಶನ ಮಾಡದಂತೆ ತಿಳಿಸಿದ್ದು, ನಾಳೆ ಅಥವಾ ನಾಡಿದ್ದು ಮತ್ತೆ ಚಿತ್ರ ಪ್ರದರ್ಶನ ಮಾಡಬಹುದು ಎಂಬ ಆದೇಶ ಬಂದರೆ, ಆಗ ಚಿತ್ರಮಂದಿರ ತೆರೆಯುತ್ತೇವೆ. | ಕೆ. ವಿ. ಚಂದ್ರಶೇಖರ್ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net