

ಬೆಂಗಳೂರು: ಕಳೆದ ಒಂದು ತಿಂಗಳಲ್ಲಿ ಪರಂವಃ ಸ್ಟುಡಿಯೋಸ್ನಿಂದ ಘೋಷಣೆಯಾಗುತ್ತಿರುವ ಮೂರನೆಯ ಚಿತ್ರ ಇದು. ಮೊದಲು ಅಭಿಜಿತ್ ಮಹೇಶ್ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ಮತ್ತು ದಿಗಂತ್ ಒಟ್ಟಿಗೆ ನಟಿಸುತ್ತಾರೆ ಎಂದು ಸುದ್ದಿಯಾಯಿತು. ನಂತರ ಚಂದ್ರಕಾಂತ್ ಬೆಳ್ಳಿಯಪ್ಪ ನಿರ್ದೇಶನದಲ್ಲಿ ವಿಹಾನ್ ಮತ್ತು ಅಂಕಿತಾ ಅಮರ್ ಅಭಿನಯದ ಹೊಸ ಚಿತ್ರದ ಘೋಷಣೆಯಾಯಿತು.
ಈಗ ತಮ್ಮ ಸಂಸ್ಥೆಯ ಮೂಲಕ ರಕ್ಷಿತ್ ‘ಮಿಥ್ಯ’ ಎಂಬ ಇನ್ನೊಂದು ಚಿತ್ರ ಘೋಷಿಸಿದ್ದು, ಈ ಚಿತ್ರದ ಮೂಲಕ ಸುಮಂತ್ ಭಟ್ ನಿರ್ದೇಶಕರಾಗುತ್ತಿದ್ದಾರೆ. ‘ಮಿಥ್ಯ’ ಚಿತ್ರವು 11 ವರ್ಷದ ಬಾಲಕನೊಬ್ಬನ ಕಥೆಯನ್ನು ಹೇಳುತ್ತದೆ. ತಂದೆ-ತಾಯಿಯ ನಿಧನದ ನಂತರ, ಅವರ ನೆನಪುಗಳಿಂದ ಹೊರಬರಲಾರದ ಪುಟ್ಟ ಬಾಲಕನೊಬ್ಬ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳತನ ಹುಡುಕುವ ಪಯಣವೇ ಈ ‘ಮಿಥ್ಯ’.
ಸುಮಂತ್ ಈ ಹಿಂದೆ ‘ಏಕಂ’ ಎಂಬ ವೆಬ್ಸರಣಿಯ ಕೆಲವು ಕಂತುಗಳನ್ನು ನಿರ್ದೇಶಿಸಿದ್ದರು. ಹಾಗೆಯೇ, ರಕ್ಷಿತ್ ಶೆಟ್ಟಿ ಅವರ ಸೆವೆನ್ ಆಡ್ಸ್ ಎಂಬ ಕಥಾತಂಡದಲ್ಲಿ ಗುರುತಿಸಿಕೊಂಡಿದ್ದರು. ಈಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಮಾಸ್ಟರ್ ಅತಿಶ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ರೂಪಾ ವರ್ಕಾಡಿ ಮುತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಉದಿತ್ ಖುರಾನ ಅವರ ಛಾಯಾಗ್ರಹಣ ಮತ್ತು ಮಿಥುನ್ ಮುಕುಂದನ್ ಅವರ ಸಂಗೀತವಿದೆ. ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.