ಕೊನೆಯಲ್ಲಿ ನೀ ಕಾಣುವೆ ಒಂಬತ್ತನೇ ದಿಕ್ಕು...: ವಿಜಯವಾಣಿ ಸಿನಿಮಾ ವಿಮರ್ಶೆ

9ne dikku
Published on

ಚಿತ್ರ: ಒಂಬತ್ತನೇ ದಿಕ್ಕು

ನಿರ್ಮಾಣ ನಿರ್ದೇಶನ: ದಯಾಳ್ ಪದ್ಮನಾಭನ್

ತಾರಾಗಣ: ಯೋಗಿ, ಅದಿತಿ ಪ್ರಭುದೇವ, ಅಶೋಕ್, ಸಾಯಿಕುಮಾರ್, ಸಂಪತ್ ಮುಂತಾದವರು

| ಚೇತನ್ ನಾಡಿಗೇರ್

ದಯಾಳ್ ಚಿತ್ರಗಳೇ ಹಾಗೆ. ಪ್ರತೀ ಚಿತ್ರಕ್ಕೂ ಅವರು ಅದೆಲ್ಲಿಂದಲೋ ಒಂದು ವಿಭಿನ್ನ ಎಳೆಯೊಂದನ್ನು ಹುಡುಕಿ ತರುತ್ತಾರೆ. ಅದನ್ನೊಂದು ವಿಶೇಷ ಚಿತ್ರ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ. ಆದರೆ, ಅದನ್ನು ಸಮರ್ಪಕವಾಗಿ ತೆರೆಗೆ ತರುವಲ್ಲಿ ಎಡವುತ್ತಾರೆ. ‘ಒಂಬತ್ತನೇ ದಿಕ್ಕು’ ಸಹ ಅದೇ ಸಾಲಿಗೆ ಸೇರುತ್ತದೆ. ಒಬ್ಬ ಬೇಟೆಗಾರ ಬೇಟೆಗಾಗಿ ಎರಡು ದಿನಗಳ ಕಾಲ ಹೊಂಚು ಹಾಕಿ ಕಾಯುತ್ತಾನೆ. ಇನ್ನೊಂದು ಕಡೆ, ಹಕ್ಕಿಯೊಂದು ತನ್ನ ಮರಿಗಳಿಗಾಗಿ ಆಹಾರ ಹುಡುಕಿಕೊಂಡು ಹೋಗುತ್ತದೆ. ಈ ಎರಡೂ ಕಥೆಗಳ ಸಂಗಮವಾದರೆ ಹುಟ್ಟುವುದು ಈ ಕಥೆ ಎಂಬ ಹಿನ್ನೆಲೆ ಧ್ವನಿಯೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಅದರಿಂದಲೇ ಚಿತ್ರ ಮುಗಿಯುತ್ತದೆ. ಒಂದು ಕಡೆ ಶಿವಮೊಗ್ಗದಲ್ಲಿ ಐದು ಕೋಟಿಗೂ ಹೆಚ್ಚು ಬೆಲೆ ಬಾಳುವ ಪುರಾತನ ಕಾಲಭೈರವೇಶ್ವರ ಶಿಲೆಯ ಕಳ್ಳತನವಾಗುತ್ತದೆ. ಆ ಶಿಲೆಯನ್ನು ಮಾರಾಟ ಮಾಡುವುದಕ್ಕೆ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಇತ್ತ ಬೆಂಗಳೂರಿನಲ್ಲಿ ಕದ್ದವರನ್ನೇ ಯಾಮಾರಿಸಿ, ಅಷ್ಟೂ ದುಡ್ಡನ್ನು ಕಬಳಿಸುವ ಹುನ್ನಾರ ನಡೆಯುತ್ತದೆ. ಈ ಎರಡೂ ಕಥೆಗಳ ಸಂಗಮದಿಂದ ಇನ್ನೊಂದು ಕಥೆ ಹುಟ್ಟುತ್ತದೆ. ಅದೇ ‘ಒಂಬತ್ತನೇ ದಿಕ್ಕು’.

ಅಮಾಯಕರು ಏನೆಲ್ಲ ಅನುಭವಿಸುತ್ತಾರೆ ಎನ್ನುವುದೇ ಇದರ ಸಾರಾಂಶ. ಕಥೆ ಕೇಳಿದರೆ ವಿಭಿನ್ನವಾಗಿದೆ ಎಂದನಿಸುವುದೇನೋ ಹೌದು. ಆದರೆ, ಚಿತ್ರ ಅರ್ಥವಾಗುವುದು ಮತ್ತು ಚಿತ್ರಕ್ಕೊಂದು ಸ್ಪಷ್ಟತೆ ಸಿಗುವುದು ಕೊನೆಯ 20 ನಿಮಿಗಳಲ್ಲಿ ಮಾತ್ರ. ಅಲ್ಲಿಯವರೆಗೂ ದಯಾಳ್ ಕುತೂಹಲ ಹಿಡಿದಿಟ್ಟುಕೊಳ್ಳುವ ಮತ್ತು ಚಿತ್ರವನ್ನು ರೋಚಕವಾಗಿಸುವ ಪ್ರಯತ್ನ ಮಾಡುತ್ತಾರಾದರೂ, ಅಷ್ಟೇನೂ ಯಶಸ್ವಿಯಾಗುವುದಿಲ್ಲ. ಕಾರಣ, ಇಲ್ಲಿ ಹಲವು ಪಾತ್ರಗಳಿವೆ ಮತ್ತು ಅವೆಲ್ಲವೂ ಚಿತ್ರವನ್ನು ಒಂದೊಂದು ದಿಕ್ಕಿನತ್ತ ಎಳೆಯುತ್ತಾ ಹೋಗುತ್ತವೆ. ಹಾಗೆ ಒಂದೊಂದು ದಿಕ್ಕಿನತ್ತ ಎಳೆದಾಗಲೂ, ಮೂಲ ಕಥೆ ನಿಧಾನವಾಗುತ್ತದೆ ಮತ್ತು ಪ್ರೇಕ್ಷಕರಿಗೆ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ.

ಚಿತ್ರದಲ್ಲಿ ಗಮನಸೆಳೆಯುವ ಒಂದು ಅಂಶವೆಂದರೆ ಅದು ಅಭಿನಯ. ಅದರಲ್ಲೂ ಹಿರಿಯ ನಟ ಅಶೋಕ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ತಮ್ಮನ್ನು ಕೊಲ್ಲಲು ಬರುವವನ ಎದುರು ಕೂತು ಅವರು ಆಡುವ ಮಾತು, ಮಾಡಿರುವ ಅಭಿನಯ ಚಿತ್ರದ ಹೈಲೈಟ್. ಸಂಪತ್, ಸಾಯಿಕುಮಾರ್, ಯೋಗಿ, ಅದಿತಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಿಹಾಲ್ ತೌರೋ ಹಾಡಿರುವ ಟೈಟಲ್ ಹಾಡು ಮತ್ತು ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net