ಮತ್ತೆ ಟಿವಿಯಲ್ಲಿ ಶಾರೂಖ್ ದರ್ಶನ ... ಹಳೆಯ ಧಾರಾವಾಹಿಗಳಿಗೆ ಬಂತು ಮರುಪ್ರಸಾರ ಭಾಗ್ಯ

Serials Final
Published on

ಶಾರೂಖ್ ಖಾನ್ ಕಿರುತೆರೆಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟು ಕೆಲವು ವರ್ಷಗಳೇ ಆಗಿವೆ. ಇತ್ತೀಚಿನ ದಿನಗಳಲ್ಲಿ ಕಿರುತೆರೆಯಿಂದ ದೂರವೇ ಇರುವ ಶಾರೂಖ್, ಇದೀಗ ಕಿರುತೆರೆಗೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ. ಹಾಗಂತ ಅವರು ಕಿರುತೆರೆಯಲ್ಲಿ ಯಾವುದೋ ಹೊಸ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ ಎಂಬ ತೀರ್ಮಾನಕ್ಕೆ ಬರಬೇಡಿ. ಶಾರೂಖ್ ಅವರು ಎಂದೋ ನಟಿಸಿದ ಧಾರಾವಾಹಿಗಳು ಈಗ ಮತ್ತೆ ದೂರದರ್ಶನದಲ್ಲಿ ಮರುಪ್ರಸಾರವಾಗುವುದಕ್ಕೆ ಸಜ್ಜಾಗುತ್ತಿದೆ.

ಹೌದು, ದೂರದರ್ಶನದಲ್ಲಿ ಎಪಿಕ್ ಧಾರಾವಾಹಿಗಳಾದ ‘ರಾಮಾಯಣ’ ಮತ್ತು ‘ಮಹಾಭಾರತ’ ಮರುಪ್ರಸಾರ ಮಾಡುವುದಕ್ಕೆ ವಾರ್ತಾ ಮತ್ತು ಪ್ರಚಾರ ಇಲಾಖೆ ತೀರ್ಮಾನ ಕೈಗೊಳ್ಳುತ್ತಿದ್ದಂತೆಯೇ ಇನ್ನಷ್ಟು ಹಳೆಯ ಧಾರಾವಾಹಿಗಳನ್ನು ಮರುಪ್ರಸಾರ ಮಾಡುವುದಕ್ಕೆ ಜನ ಡಿಮ್ಯಾಂಡ್ ಇಡುತ್ತಿದ್ದಾರೆ. ಈ ಪೈಕಿ ಈಗಾಗಲೇ ‘ಸರ್ಕಸ್’ ಧಾರಾವಾಹಿಯ ಮರುಪ್ರಸಾರ ಪ್ರಾರಂಭವಾಗಿದೆ. ‘ಶಕ್ತಿಮಾನ್’ ಸಹ ಮರುಪ್ರಸಾರವಾಗಲಿದೆ ಎಂದು ಆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಖೇಶ್ ಖನ್ನಾ ಹೇಳಿದ್ದಾರೆ. ಇವೆರೆಡು ಧಾರಾವಾಹಿಗಳ ಜತೆಗೆ 80 ಮತ್ತು 90 ದಶಕಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕೆಲವು ಕ್ಲಾಸಿಕ್ ಧಾರಾವಾಹಿಗಳಾದ ‘ಮಾಲ್ಗುಡಿ ಡೇಸ್’, ‘ಭ್ಯೋಮಕೇಶ ಭಕ್ಷಿ’, ‘ಫೌಜಿ’, ‘ವಾಗ್ಲೇ ಕೀ ದುನಿಯಾ’ ಮುಂತಾದ ಧಾರಾವಾಹಿಗಳು ಸಹ ಸದ್ಯದಲ್ಲೇ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಧಾರಾವಾಹಿಗಳನ್ನು ಮರುಪ್ರಸಾರ ಮಾಡುವ ಚಿಂತನೆ ಮಾಡುತ್ತಿದ್ದು, ಸೂಕ್ತ ಸಮಯ ನೋಡಿಕೊಂಡು ಒಂದೊಂದೇ ಧಾರಾವಾಹಿಗಳನ್ನು ಪ್ರಸಾರ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಈ ಪೈಕಿ ಶಾರೂಖ್ ಖಾನ್ ಅಭಿನಯದ ‘ಫೌಜಿ’, ‘ಸರ್ಕಸ್’ ಮತ್ತು ‘ವಾಗ್ಲೇ ಕೀ ದುನಿಯಾ’ ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಶಾರೂಖ್ ಹಿರಿತೆರೆಯಲ್ಲಿ ನಟನಾಗಿ ಗುರುತಿಸಿಕೊಳ್ಳುವುದಕ್ಕಿಂತ ಮುನ್ನ ದೂರದರ್ಶನದ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಲ್ಲಿ ಜನಪ್ರಿಯತೆ ಸಿಗುತ್ತಿದ್ದಂತೆಯೇ ಹಿರಿತೆರೆಗೆ ಎಂಟ್ರಿ ಕೊಟ್ಟು, ಅಲ್ಲೂ ಜನಪ್ರಿಯ ಸ್ಟಾರ್ ಆದರು. ಆ ನಂತರ ಅವರು ಕೆಲವು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟರಾದರೂ, ಯಾವುದೇ ಧಾರಾವಾಹಿಯಲ್ಲೂ ಬಣ್ಣ ಹಚ್ಚಿರಲಿಲ್ಲ. ಈಗ ಅವರ ಹಳೆಯ ಧಾರಾವಾಹಿಗಳನ್ನು ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net