

ಬೆಂಗಳೂರು: 'ನಾನು ಅವನಲ್ಲ ಅವಳು' ಚಿತ್ರದ ಮೂಲಕ ಸಂಚಾರಿ ವಿಜಯ್ ಜನಪ್ರಿಯರಾದರೂ, ಅದು ಅವರ ಮೊದಲ ಚಿತ್ರ ಆಗಿರಲಿಲ್ಲ. 'ನಾನು ಅವನಲ್ಲ ಅವಳು' ಚಿತ್ರಕ್ಕೂ ಮುಂಚೆಯೇ ಅವರು ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ಅದ್ಯಾವುದೂ ಅಷ್ಟು ಯಶಸ್ವಿಯಾಗದ ಕಾರಣ, ಅವರು 'ನಾನು ಅವನಲ್ಲ ಅವಳು' ಚಿತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟ ಪಡೆಯುವುದಕ್ಕೆ ಕಾಯಬೇಕಾಯಿತು.
ಸಂಚಾರಿ ವಿಜಯ್ ಅವರ ಮೊದಲ ಚಿತ್ರ ರಮೇಶ್ ಅರವಿಂದ್ ಅಭಿನಯದ ‘ರಂಗಪ್ಪ ಹೋಗ್ಬಿಟ್ನಾ’. ಈ ಚಿತ್ರದಲ್ಲೊಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ಆ ನಂತರ ‘ದಾಸವಾಳ’ ಚಿತ್ರದಲ್ಲಿ ನಟಿಸಿದ್ದರು. ‘ದಾಸವಾಳ’ ಸಿನಿಮಾದಲ್ಲಿ ವಿಜಯ್ ನಟನೆ ನೋಡಿ ಬಹಳಷ್ಟು ಜನ ಅಚ್ಚರಿಗೊಂಡಿದ್ದರು. ಈ ಚಿತ್ರದಿಂದ ಅವರೊಬ್ಬ ಅಪ್ಪಟ ಪ್ರತಿಭಾವಂತನೆಂದು ಸಾಬೀತಾದರೂ, ಅದರಿಂದ ವಿಜಯ್‌ಗೆ ಜಾಸ್ತಿ ಅವಕಾಶ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಬಹಳಷ್ಟು ನಿರ್ಮಾಪಕ-ನಿರ್ದೇಶಕರ ಬಳಿ ಹೋಗಿ ಅವರೇ ಅವಕಾಶ ಕೇಳಿದ್ದೂ ಇದೆಯಂತೆ.
ಈ ಸಂದರ್ಭದಲ್ಲಿ, ಪ್ರಕಾಶ್ ರೈ ತಮ್ಮ ‘ಒಗ್ಗರಣೆ’ ಚಿತ್ರದಲ್ಲೊಂದು ಟ್ರಾನ್ಸ್ಜೆಂಡರರ್ ಪಾತ್ರ ನೀಡಿದರು. ಚಿಕ್ಕ ಪಾತ್ರವಾದರೂ, ಅದು ಬಹಳಷ್ಟು ಜನರ ಗಮನಸೆಳೆಯಿತು. ವಿಜಯ್‌ಗೆ 'ನಾನು ಅವನಲ್ಲ ಅವಳು' ಚಿತ್ರದಲ್ಲಿ ಅವಕಾಶ ಸಿಗುವುದಕ್ಕೂ ಅದೇ ಕಾರಣ ಎಂದರೆ ತಪ್ಪಿಲ್ಲ. ‘ನಾನು ಅವನಲ್ಲ ಅವಳು’ ಚಿತ್ರದಲ್ಲಿ ತೃತೀಯ ಲಿಂಗೀಯ ಪಾತ್ರದಲ್ಲಿ ಅಚ್ಚುಕಟ್ಟಾಗಿ ಗಮನಸೆಳೆದ ವಿಜಯ್, ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಷ್ಟೇ ಅಲ್ಲ, ಆ ನಂತರ ಕ್ರಮೇಣ ಕನ್ನಡ ಚಿತ್ರರಂಗದಲ್ಲಿ ಹಲವು ಪಾತ್ರಗಳ ಮೂಲ ಮಿಂಚಿದರು.