

ಪೋಸ್ಟರ್ ಬಿಡುಗಡೆ ಮಾಡೋದಕ್ಕೆ ಸಾಧ್ಯವಾ ಅಂತ ಕೇಳುವುದಕ್ಕೆ ಫೋನ್ ಮಾಡಿದ್ದರಂತೆ ರಾಜೇಶ್ ನಟರಂಗ. ಆದರೆ, ಯಶ್ ಏನು, ಎತ್ತ ಎಂದು ಸಹ ಕೇಳಲಿಲ್ಲವಂತೆ. ಡೇಟು, ಟೈಮು ಪಕ್ಕಾ ಮಾಡಿಕೊಂಡು ಸೀದಾ, ರಾಜೇಶ್ ಹೀರೋ ಆಗಿ ಅಭಿನಯಿಸುತ್ತಿರುವ ‘ಓಬಿರಾಯನ ಕಥೆ’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವುದಕ್ಕೆ ರೇಣುಕಾಂಬ ಸ್ಟುಡಿಯೋಗೆ ಬಂದುಬಿಟ್ಟರು.
ಅವರ ಬರುವಿಕೆಗಾಗಿ ಕಾಯುತ್ತಿದ್ದ ಚಿತ್ರತಂಡದವರು, ಚಿತ್ರದ ಬಗ್ಗೆ ಮಾತನಾಡಿದರು. ನಿರ್ದೇಶಕ ವಿನಯ್ ಶಾಸ್ತ್ರಿಗೆ ಇದು ಮೊದಲ ಚಿತ್ರ. ಕಳೆದ 18 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಅವರು, ತಮ್ಮದೇ ತಂಡ ಕಟ್ಟಿಕೊಂಡು ಕೆಲವು ನಾಟಕಗಳನ್ನು ಮಾಡಿದ್ದಾರಂತೆ. ಈಗ ‘ಓಬಿರಾಯನ ಕಥೆ’ ಮಾಡಿಕೊಂಡು ನಿರ್ದೇಶನಕ್ಕೆ ಇಳಿದಿದ್ದಾರೆ.
‘ಇದೊಂದು ಅಪ್ಪ-ಮಗನ ಕಥೆ. ದತ್ತಣ್ಣ ಮತ್ತು ರಾಜೇಶ್ ಅಪ್ಪ-ಮಗನಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಜೇಶ್ ಅವರದ್ದು ಫೋಟೋಗ್ರಾಫರ್ನ ಪಾತ್ರ. ಚಿತ್ರದಲ್ಲಿ ಆರು ಮುಖ್ಯ ಪಾತ್ರಗಳಿರುತ್ತವೆ. ರಘು ದೀಕ್ಷಿತ್ ಸಂಗೀತ ಸಂಯೋಜಿಸುವುದರ ಜತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದು ಮಾಹಿತಿ ಕೊಟ್ಟರು ವಿನಯ್. ಅಷ್ಟರಲ್ಲಿ ಯಶ್ ಆಗಮನವಾಯಿತು. ಪೋಸ್ಟರ್ ಬಿಡುಗಡೆ ಮಾಡಿದ ಅವರು ‘ನನ್ನ ಮತ್ತು ರಾಜೇಶ್ ಅವರ ಸ್ನೇಹ, ‘ಪ್ರೀತಿ ಇಲ್ಲದ ಮೇಲೆ’ ಸಮಯದ್ದು. ನಾನವರನ್ನ ಅಣ್ಣ ಅಂತೀನಿ. ಅವರಿಂದ ತುಂಬಾ ಕಲಿತಿದ್ದೀನಿ. ಅವರಿಗೆ ತಾಳ್ಮೆ ಜಾಸ್ತಿ. ಅವರು ಈಗ ಹೀರೋ ಆಗುತ್ತಿದ್ದಾರೆ. ಅವರು ಯಾವಾಗಲೂ ಹೀರೋನೇ. ಅವರಿಗೆ ನಿರ್ದೇಶನ ಮಾಡುವ ಸಾಮರ್ಥ್ಯ ಸಹ ಇದೆ. ಮುಂದೆ ನಿರ್ದೇಶನ ಮಾಡಲಿ. ಈ ಚಿತ್ರದ ಹೆಸರು ಬಹಳ ಚೆನ್ನಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದರು. ಕೊನೆಗೆ ರಾಜೇಶ್ ಮಾತನಾಡಿದರು. ‘ನಾನೊಬ್ಬ ವಿಧೇಯ ನಟ. ನಿರ್ದೇಶಕರು ಏನು ಹೇಳ್ತಾರೋ ಮಾಡುತ್ತೀನಿ. ಇವತ್ತು ಯಶ್ ಬಂದು ಟೈಟಲ್ ಬಿಡುಗಡೆ ಮಾಡಿದ್ದಾರೆ. ಏಪ್ರಿಲ್ನಿಂದ ಚಿತ್ರ ಪ್ರಾರಂಭವಾಗಲಿದೆ. ಎಲ್ಲರ ಹಾರೈಕೆಗಳಿರಲಿ’ ಎಂದರು.
ವೇದಿಕೆ ಮೇಲಿದ್ದ ದತ್ತಣ್ಣ, ರಘು ದೀಕ್ಷಿತ್, ಚೈತ್ರ ಆಚಾರ್, ನಿರ್ವಪಕ ಶಾಮ್ ಅನ್ನೂರ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.