ಈ ತ್ರಿಕೋನ ಪ್ರೇಮಕಥೆಯಲ್ಲಿ ಹೀರೋ ಯಾರು? ವಿಲನ್ ಯಾರು​?

O Manase
Published on

ಬೆಂಗಳೂರು: ವಿಜಯ್​ ರಾಘವೇಂದ್ರ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುವುದರಲ್ಲಿ ಬಿಜಿಯಾಗಿದ್ದಾರೆ. ಅಂಥದ್ದೊಂದು ಚಿತ್ರ ಇದೀಗ ಮುಕ್ತಾಯವಾಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಅದೇ 'ಓ ಮನಸೇ'. ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಇತ್ತೀಚೆಗೆ ಈ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

ತ್ರಿಕೋನ ಪ್ರೇಮಕಥೆಯೆಂದರೆ, ಇಲ್ಲಿ ಇನ್ನೊಬ್ಬ ಹೀರೋ ಅಥವಾ ಹೀರೋಯಿನ್​ ಇರಬೇಕು. ಇದು ಇಬ್ಬರು ಯುವಕರು ಮತ್ತು ಒಬ್ಬ ಯುವತಿಯ ಸುತ್ತ ಸಾಗುವ ಚಿತ್ರ. ಇಲ್ಲಿ ಇನ್ನೊಬ್ಬ ನಾಯಕನಾಗಿ ಧರ್ಮ ಕೀರ್ತಿರಾಜ್​ ನಟಿಸಿದ್ದು, ನಾಯಕಿಯಾಗಿ ಸಂಚಿತಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಉಮೇಶ್​ ಗೌಡ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

'ಓ ಮನಸೇ' ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡುವ ವಿಜಯ್​ ರಾಘವೇಂದ್ರ, 'ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಕರೊನಾ ಸಮಯದಲ್ಲಿ ಬಿಡುವಿದ್ದಾಗ, ನಿರ್ದೇಶಕರು ಬಂದು ಈ ಚಿತ್ರದ ಕಥೆ ಹೇಳಿದರು. ಇದೊಂಥರಾ ಲಕ್ಕಿ ಚಿತ್ರ ನನಗೆ. ಈ ಚಿತ್ರ ಒಪ್ಪಿದ ನಂತರ ಸಾಲುಸಾಲು ಚಿತ್ರಗಳಲ್ಲಿ ನಾನು ನಟಿಸಿದೆ' ಎನ್ನುತ್ತಾರೆ.

ಕೊರೋನ ಸಮಯದಲ್ಲಿ ಅವಕಾಶಗಳು ಕಡಿಮೆ ಇದ್ದಂತಹ ಸಮಯದಲ್ಲಿ ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತಂತೆ. 'ನಿರ್ಮಾಪಕರು ಅಡ್ವಾನ್ಸ್ ಕೊಟ್ಟ ಘಳಿಗೆ ಚೆನ್ನಾಗಿದೆ. ಆನಂತರ ಸಾಕಷ್ಟು ಚಿತ್ರಗಳು ಬಂದವು. ಈ ಚಿತ್ರದ ಬಗ್ಗೆ ಹೇಳಬೇಕಾದರೆ, ನಾಯಕಿಯನ್ನು ನಾನು ಹಾಗೂ ವಿಜಯ ರಾಘವೇಂದ್ರ ಇಬ್ಬರೂ ಪ್ರೀತಿಸುತ್ತೇವೆ. ನಮ್ಮಿಬ್ಬರಲ್ಲಿ ಯಾರಿಗೆ ಸಿಗುತ್ತಾರೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು' ಎನ್ನುತ್ತಾರೆ ಧರ್ಮ ಕೀರ್ತಿರಾಜ್.

ಈ ಚಿತ್ರವನ್ನು ‌ಎಂ.ಎನ್ ಭೈರೇಗೌಡ, ಧನಂಜಯ್, ಯುವರಾಜು, ಸು.ಕಾ.ರಾಮು ಮತ್ತು ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ವಿಜಯ್​ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ, ಹರೀಶ್ ರಾಯ್, ಸಾಧು ಕೋಕಿಲ, ಶೋಭರಾಜ್, ಕಿಲ್ಲರ್ ವೆಂಕಟೇಶ್, ವಾಣಿಶ್ರೀ, ಜಯರಾಮ್, ತ್ರಿವೇಣಿ ರಾವ್ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net