ಪರಿಣೀತಿ ಹೋದರು ನೋರಾ ಬಂದರು!

NB 1
Published on

ಅಜಯ್ ದೇವಗನ್ ಮತ್ತು ಸೋನಾಕ್ಷಿ ಸಿನ್ಹಾ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಭುಜ್; ದಿ ಪ್ರೖೆಡ್ ಆಫ್ ಇಂಡಿಯಾ’ ಸಿನಿಮಾದಲ್ಲಿ ಪರಿಣೀತಿ ಚೋಪ್ರಾ ನಟಿಸಲಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಅಧಿಕೃತವಾಗಿ ಸಿನಿಮಾದಲ್ಲಿ ನಟಿಸುವ ಬಗ್ಗೆ ಪರಿಣೀತಿ ಹೇಳಿಕೊಂಡಿದ್ದರು. ಈಗ ಅದೇ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವುದರಿಂದ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ‘ಭುಜ್..’ಗೆ ಬೈ ಬೈ ಹೇಳಿದ್ದಾರೆ! ಹಾಗಾದರೆ ಅವರ ಜಾಗಕ್ಕೆ ಯಾರು? ಅದಕ್ಕೂ ಈಗ ಉತ್ತರ ಸಿಕ್ಕಿದೆ.

ಮಾದಕ ನೃತ್ಯದ ಮೂಲಕವೇ ಎಲ್ಲರ ಗಮನ ಸೆಳೆದಿರುವ ರೂಪದರ್ಶಿ ನೋರಾ ಫತೇಹಿ ‘ಭುಜ್..’ ಚಿತ್ರಕ್ಕೆ ಎಂಟ್ರಿ ಪಡೆದಿದ್ದಾರೆ. ಬಾಲಿವುಡ್​ನಿಂದಲೇ ಸಿನಿಮಾ ಜರ್ನಿ ಆರಂಭಿಸಿದ್ದ ನೋರಾ, ನಂತರದ ದಿನಗಳಲ್ಲಿ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲೂ ಹಾಜರಿ ಹಾಕಿ ಬಂದರು. ತೆಲುಗಿನ ‘ಟೆಂಪರ್’, ಬಾಲಿವುಡ್​ನಲ್ಲಿ ‘ಸ್ತ್ರೀ’, ‘ಬಾಟ್ಲಾ ಹೌಸ್’, ‘ಸ್ಟ್ರೀಟ್ ಡಾನ್ಸರ್’ ಸೇರಿ ಹತ್ತಾರು ಐಟಂ ಹಾಡುಗಳಲ್ಲಿ ಹೆಜ್ಜೆ ಹಾಕಿ ಗುರುತಿಸಿಕೊಂಡರು. ಈಗ ‘ಭುಜ್..’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಚಿತ್ರದಲ್ಲಿ ಅವರ ಲುಕ್ ಹೇಗಿರಲಿದೆ? ಪಾತ್ರ ಎಂಥದ್ದು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಅಂದಹಾಗೆ, 1971ರ ಕಾಲಘಟ್ಟದಲ್ಲಿ ನಡೆದ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ನಡೆದ ಸತ್ಯಘಟನೆಗಳನ್ನು ಆಧರಿಸಿ ‘ಭುಜ್; ದಿ ಪ್ರೖೆಡ್ ಆಫ್ ಇಂಡಿಯಾ’ ಸಿನಿಮಾ ಸಿದ್ಧವಾಗುತ್ತಿದೆ. ಏರ್​ಫೋರ್ಸ್ ಅಧಿಕಾರಿ ವಿಜಯ್ ಕಾರ್ಣಿಕ್ ಪಾತ್ರದಲ್ಲಿ ಅಜಯ್ ದೇವಗನ್ ಕಾಣಿಸಿ ಕೊಳ್ಳುತ್ತಿದ್ದು, ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಅಭಿಷೇಕ್ ದುಧೈಯಾ ನಿರ್ದೇಶನ ಮಾಡುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net