

ಕಳೆದ ಒಂದೂವರೆ ತಿಂಗಳುಗಳಿಂದ 'ಫ್ಯಾಂಟಮ್' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ ಎರಡು ಸ್ನೀಕ್ಪೀಕ್ಗಳು ಮತ್ತು ಮೂರು ಫಸ್ಟ್ ಲುಕ್ ಪೋಸ್ಟರ್ಗಳು ಬಿಡುಗಡೆಯಾಗಿವೆ.
ಈ ಪೈಕಿ ಸುದೀಪ್ ಅವರ ಫಸ್ಟ್ ಲುಕ್ ಬಗ್ಗೆ ಸಾಕಷ್ಟು ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ಈ ಮಧ್ಯೆ, ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೀಸರ್ ಬಿಡುಗಡೆ ಆಗಬಹುದು ಎಂಬ ಆಸೆ ಅವರ ಅಭಿಮಾನಿಗಳಲ್ಲಿತ್ತು. ಆದರೆ, ಇದೀಗ ನಿರ್ದೇಶಕ ಅನೂಪ್ ಭಂಡಾರಿ ಅವರೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸುದೀಪ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸುವುದರ ಜತೆಗೆ, ಅದಕ್ಕೆ ಕಾರಣವನ್ನೂ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು 'ಕೋಟಿಗೊಬ್ಬ 3'' ಚಿತ್ರದ ಟೀಸರ್ ಬಿಡುಗಡೆ ಆಗುತ್ತಿದೆ. ಎರಡೂ ಚಿತ್ರಗಳ ಟೀಸರ್ ಕ್ಲಾಶ್ ಆಗಬಾರದೆಂಬ ದೃಷ್ಟಿಯಿಂದ ಸುದೀಪ್ ಹುಟ್ಟುಹಬ್ಬಕ್ಕೆ 'ಫ್ಯಾಂಟಮ್' ಟೀಸರ್ ಬಿಡುಗಡೆ ಮಾಡುತ್ತಿಲ್ಲ. ಯಾವಾಗ ಮಾಡುತ್ತೀವಿ ಎಂದು ಸದ್ಯದಲ್ಲೇ ತಿಳಿಸುತ್ತವೇ. ಈ ಮಧ್ಯೆ, 'ಕೋಟಿಗೊಬ್ಬ 3' ಟೀಸರ್ಗೆ ಸ್ವಾಗತ ಮತ್ತು ಶುಭಾಶಯಗಳು' ಎಂದು ಅನೂಪ್ ಬರೆದುಕೊಂಡಿದ್ದಾರೆ.
'ಫ್ಯಾಂಟಮ್' ಚಿತ್ರದಲ್ಲಿ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜತೆಗೆ ಶ್ರದ್ಧಾ ಶ್ರೀನಾಥ್, ನಿರೂಪ್ ಭಂಡಾರಿ ಮುಂತಾದವರು ನಟಿಸುತ್ತಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ 'ಫ್ಯಾಂಟಮ್' ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ.