

ಇತ್ತೀಚೆಗಷ್ಟೇ ಫಸ್ಟ್ ಲುಕ್ ಮೂಲಕ ಗಮನ ಸೆಳೆದ ಸಿನಿಮಾ ‘ಪುಷ್ಪ’. ಅಲ್ಲು ಅರ್ಜುನ್ ನಾಯಕನಾಗಿ ನಟಿಸಲಿರುವ ಈ ಸಿನಿಮಾ ತೆಲುಗು ಜತೆಗೆ, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗಲಿರುವುದು ಗೊತ್ತಿರುವ ವಿಚಾರ. ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿರುವುದು ತುಂಬ ಹಳೇ ಸುದ್ದಿ. ಹೀಗಿರುವಾಗ ಇದೀಗ ಇದೇ ಚಿತ್ರತಂಡದಿಂದ ನಾಯಕಿ ವಿಚಾರದ ಬಗ್ಗೆ ಹೊಸ ಸುದ್ದಿಯೊಂದು ಹೊರಬಂದಿದೆ. ರಶ್ಮಿಕಾ ಜತೆಯಲ್ಲಿ ಮತ್ತೋರ್ವ ನಟಿ ನಿವಿತಾ ಥಾಮಸ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಇದೀಗ ಈ ಸುದ್ದಿ ಸುಳ್ಳು ಎಂಬ ಮಾತುಗಳು ಕೇಳಿಬರುತ್ತಿವೆ. ಇದೆಲ್ಲದಕ್ಕೂ ಉತ್ತರ ನೀಡಿರುವ ಪ್ರೊಡಕ್ಷನ್ ಟೀಮ್, ‘ಇದೆಲ್ಲ ಸುಳ್ಳು. ನಮ್ಮ ಚಿತ್ರದಲ್ಲಿ ಒಬ್ಬರೇ ನಾಯಕಿ. ಅದುವೆ ರಶ್ಮಿಕಾ ಮಂದಣ್ಣ. ಇನ್ನುಳಿದಂತೆ ಎರಡನೇ ನಾಯಕಿ ಎಂಬ ಪರಿಕಲ್ಪನೆಯೇ ಇಲ್ಲ’ ಎಂದು ಹೇಳಿಕೊಂಡಿದೆ.
ಸದ್ಯ ಲಾಕ್ಡೌನ್ ತೆರವಾದ ಬಳಿಕ ಸರ್ಕಾರದಿಂದಲೂ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ, ಚಿತ್ರದ ಶೂಟಂಗ್ ಶುರುಮಾಡಲಿದೆಯಂತೆ ಚಿತ್ರತಂಡ. ಸುಕುಮಾರ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಲಿದೆ.