ದುಡ್ಡು ಉಳಿಸಲು ರೊಮ್ಯಾನ್ಸ್ ಕಟ್ ... ‘ವಕೀಲ್ ಸಾಬ್’ನ ಹೊಸ ಸ್ಟ್ರಾಟಜಿ

Vakeel Saab Final
Published on

ಟಾಲಿವುಡ್ ನಟ ಪವನ್ ಕಲ್ಯಾಣ್ ‘ವಕೀಲ್ ಸಾಬ್’ ಎಂಬ ಹೊಸ ಚಿತ್ರದಲ್ಲಿ ಎರಡು ವರ್ಷಗಳ ನಂತರ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ಪವನ್ ಕಲ್ಯಾಣ್ 50 ಕೋಟಿ ಸಂಭಾವನೆ ಪಡೆದಿದ್ದೂ ಹಳೆಯ ವಿಷಯವೇ. ಹೊಸ ವಿಷಯವೆಂದರೆ, ಈಗ ದುಡ್ಡು ಉಳಿಸುವುದಕ್ಕೆ ನಿರ್ಮಾಪಕ ದಿಲ್ ರಾಜು ಅವರು, ಚಿತ್ರದಲ್ಲಿನ ಲವ್ ಟ್ರಾಕ್ ಕಿತ್ತು ಹಾಕುವುದಕ್ಕೆ ಇದೀಗ ತೀರ್ಮಾನಿಸಿದ್ದಾರೆ.

ಹೌದು, ಚಿತ್ರದ ಲವ್ ಟ್ರಾಕ್ ಕಿತ್ತು ಹಾಕುವ ಯೋಚನೆಗೆ ಚಿತ್ರತಂಡ ಬಂದಿದ್ದು, ಅದಕ್ಕೆ ಕಾರಣಗಳೂ ಇವೆ. ಮೊದಲಿಗೆ, ಪವನ್ ಕಲ್ಯಾಣ್ ಅವರಿಗೆ 30 ದಿನಗಳ ಕಾಲ್‌ಶೀಟ್‌ಗೆ 50 ಕೋಟಿ ಸಂಭಾವನೆ ನೀಡಲಾಗಿತ್ತು. ಪವನ್‌ಗೆ ಏಕಾಏಕಿ ಅಷ್ಟೊಂದು ಕೊಡುವುದಕ್ಕೆ ದಿಲ್ ರಾಜ್‌ಗೆ ಒಂದು ಕಾರಣವೂ ಇತ್ತು. ಅದೇನೆಂದರೆ, ಬೇಸಿಗೆಯ ರಜೆಗೆ ಈ ಬಾರಿ ಟಾಲಿವುಡ್‌ನಲ್ಲಿ ಯಾವುದೇ ದೊಡ್ಡ ರಿಲೀಸ್‌ಗಳಿರಲಿಲ್ಲ. ಹಾಗಾಗಿ ಪವನ್ ಕಲ್ಯಾಣ್ ಅವರ ಕಾಲ್‌ಶೀಟ್ ಪಡೆದು, ಕಡಿಮೆ ದಿನಗಳಲ್ಲಿ ಒಂದು ಚಿತ್ರ ಮಾಡಿ ಮುಗಿಸಬೇಕು ಎಂಬುದು ಚಿತ್ರತಂಡದ ಐಡಿಯಾ ಆಗಿತ್ತು. ಹೇಗೂ ಪವನ್ ಕಲ್ಯಾಣ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡು ವರ್ಷಗಳಾಗಿವೆ. ಬೇಗ ಚಿತ್ರ ಬಿಡುಗಡೆ ಮಾಡಿದರೆ, ಜನ ಮುಗಿಬಿದ್ದು ಚಿತ್ರ ನೋಡುವುದು ಗ್ಯಾರಂಟಿ ಎಂದು ಚಿತ್ರತಂಡದ ಮೊದಲ ಸ್ಟ್ರಾಟಜಿ ಆಗಿತ್ತು.

ಆದರೆ, ಇದೀಗ ಎಲ್ಲಾ ತಲೆ ಕೆಳಗಾಗಿದೆ. ಲಾಕ್‌ಡೌನ್‌ನಿಂದಾಗಿ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಹಾಗಾಗಿ ದಿಲ್ ರಾಜು ಹೊಸ ಐಡಿಯಾ ಮಾಡಿದ್ದಾರೆ. ಈ ಮೊದಲು ಪವನ್ ಅವರಿಗೆ ಒಂದು ಲವ್ ಟ್ರಾಕ್ ಇತ್ತಂತೆ. ಅದಕ್ಕೆ ನಾಯಕಿಯ ಹುಡುಕಾಟ ಸಹ ನಡೆಯುತಿತ್ತಂತೆ. ಈಗ ಆ ಲವ್ ಟ್ರಾಕ್ ಬಿಟ್ಟುಬಿಡುವುದಕ್ಕೆ ಚಿತ್ರತಂಡ ಯೋಚಿಸಿದೆ. ಅದನ್ನು ಇಟ್ಟುಕೊಂಡರೆ ನಾಯಕಿಯ ಸಂಭಾವನೆ, ಫಾರಿನ್ ಚಿತ್ರೀಕರಣ ಎಂದು ಇನ್ನಷ್ಟು ದುಡ್ಡು ಖರ್ಚಾಗುವುದು ಖಚಿತ. ಇದರಿಂದ ಕಾಸ್ಟ್ ಆ್ ಪ್ರೊಡಕ್ಷನ್ ಸಹ ಜಾಸ್ತಿಯಾಗುತ್ತದೆ. ಮೇಲಾಗಿ ಮತ್ತೆ ಒಂದಿಷ್ಟು ದಿನಗಳ ಚಿತ್ರೀಕರಣ ಮಾಡಬೇಕಾಗಿರುವುದಿಂದ, ಇನ್ನಷ್ಟು ಸಮಯವೂ ಹಾಳು. ಹಾಗಾಗಿ ಇಡೀ ಲವ್ ಟ್ರಾಕ್ ಪಕ್ಕಕ್ಕಿಟ್ಟು ಬಿಟ್ಟರೆ, ಸಮಯ ಮತ್ತು ದುಡ್ಡು ಉಳಿಸುವುದರ ಜತೆಗೆ, ಆದಷ್ಟು ಬೇಗ ಚಿತ್ರ ಬಿಡುಗಡೆ ಮಾಡಬಹುದು ಎಂಬುದು ಚಿತ್ರತಂಡದ ಐಡಿಯಾ.

ಅಲ್ಲಿಗೆ, ‘ವಕೀಲ್ ಸಾಬ್’ ಚಿತ್ರದಲ್ಲಿ ಪವನ್‌ಗೆ ಹಾಡು, ಡ್ಯಾನ್ಸು ಯಾವುದೂ ಇರುವುದಿಲ್ಲ. ಈ ಬಗ್ಗೆ ಅಭಿಮಾನಿಗಳು ಬೇಸರ ಮಾಡಿಕೊಳ್ಳದಿದ್ದರೆ ಸಾಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net