ವರಮಹಾಲಕ್ಷ್ಮೀ ಹಬ್ಬಕ್ಕೆ ನಿರೀಕ್ಷಿತ ಚಿತ್ರಗಳೇ ಇಲ್ಲ

Raghavendra Stores
Published on

ಬೆಂಗಳೂರು: ಪ್ರತೀ ವರ್ಷ ವರಮಹಾಲಕ್ಷ್ಮೀ ಹಬ್ಬ ಬಂತು ಎಂದರೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಭ್ರಮ ಮನೆ ಮಾಡಿರುತ್ತಿತ್ತು. ಹಿಂದಿನ ವರ್ಷಗಳಲ್ಲಿ ಇದೇ ಹಬ್ಬದಂದು ‘ಆಪ್ತಮಿತ್ರ’, ‘ಜೋಗಿ’ ಮುಂತಾದ ಸೂಪರ್ ಹಿಟ್ ಚಿತ್ರಗಳು ಬಿಡುಗಡೆಯಾದ ಉದಾಹರಣೆಗಳಿವೆ. ಆದರೆ, ಈ ವರ್ಷ ಕನ್ನಡ ಚಿತ್ರರಂಗದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಅಷ್ಟೇನೂ ಸಂಭ್ರಮ ಕಾಣುತ್ತಿಲ್ಲ.

ಕೆಲವು ತಿಂಗಳುಗಳ ಮುಂಚೆಯೇ ಆಗಸ್ಟ್ 5ಕ್ಕೆ ಹಬ್ಬದ ಪ್ರಯುಕ್ತ ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ ಚಿತ್ರ ಘೋಷಣೆಯಾಗಿತ್ತು. ಹೊಂಬಾಳೆ ಫಿಲಂಸ್ ನಿರ್ವಣದ ಮತ್ತು ಸಂತೋಷ್ ಆನಂದರಾಮ್ ನಿರ್ದೇಶನದ ಚಿತ್ರವಾದ್ದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿತ್ತು. ಆದರೆ, ಕಾರಣಾಂತರಗಳಿಂದ ‘ರಾಘವೇಂದ್ರ ಸ್ಟೋರ್ಸ್’ ಮುಂದಕ್ಕೆ ಹೋಗಿದೆ. ಅಷ್ಟೇ ಅಲ್ಲ, ಬೇರ್ಯಾವ ನಿರೀಕ್ಷಿತ ಚಿತ್ರ ಅಂದು ಬಿಡುಗಡೆಯಾಗುತ್ತಿಲ್ಲ. ಮಿಕ್ಕಂತೆ, ಒಂದೆರೆಡು ಸಣ್ಣ ಚಿತ್ರಗಳು ಬಿಡುಗಡೆಯಾಗಬಹುದು.

ಆಗಸ್ಟ್ 5ರ ಬದಲಾಗಿ 12ಕ್ಕೆ ಸಂಭ್ರಮದ ವಾತಾವರಣವಿದೆ. ಅಂದು ಮೂರು ದೊಡ್ಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸಿವೆ. ರವಿಚಂದ್ರನ್ ನಿರ್ದೇಶನದ ‘ರವಿ ಬೋಪಣ್ಣ’, ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಮತ್ತು ಪ್ರಜ್ವಲ್ ಅಭಿನಯದ ‘ಅಬ್ಬರ’ ಚಿತ್ರಗಳು ಆ ದಿನ ಬಿಡುಗಡೆಯಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net