

ಅದೆಲ್ಲಿಂದ ಶುರುವಾಯ್ತೋ, ಯಾರು ಶುರು ಮಾಡಿದರೋ ಗೊತ್ತಿಲ್ಲ. ನಿತ್ಯಾ ಮೆನನ್ ಮಲಯಾಳಂನ ಜನಪ್ರಿಯ ನಟರೊಬ್ಬರ ಜತೆಗೆ ಮದುವೆಯಾಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಯಾವಾಗ ಈ ವಿಷಯವಾಗಿ ನಿತ್ಯಾ ಪ್ರತಿಕ್ರಿಯಿಸಲಿಲ್ಲವೋ, ಆಗ ಅದಿನ್ನೂ ಹೆಚ್ಚಾಯಿತು. ಈಗ ನಿತ್ಯಾ ಕೊನೆಗೂ ಈ ವಿಷಯವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಇದೊಂದು ಸುಳ್ಳುಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ನನ್ನ ಮದುವೆ ವಿಚಾರವಾಗಿ ಹಬ್ಬಿರುವ ಸುದ್ದಿಗಳಲ್ಲಿ ಸ್ವಲ್ಪವೂ ನಿಜಾಂಶವಿಲ್ಲ. ಇಷ್ಟು ದೊಡ್ಡ ಸುದ್ದಿ ಮಾಡುವ ಮೂಲಕ ಕನಿಷ್ಠ ಒಂದು ಬಾರಿ ಕೇಳಿದರೆ ಚೆನ್ನ ಅಲ್ಲವೇ?’ ಎಂದು ಅವರು ಪ್ರಶ್ನಿಸಿದ್ದಾರೆ. ಯಾವಾಗ ನಿತ್ಯಾ ಕಡೆಯಿಂದ ಸ್ಪಷ್ಟೀಕರಣ ಬಂತೋ, ಆಗ ಎಲ್ಲವೂ ತಣ್ಣಗಾಗಿದೆ.
ಈ ವರ್ಷದ ಆರಂಭದಲ್ಲಿ ನಿತ್ಯಾ ಅಭಿನಯದ ‘ಭೀಮ್ಲಾ ನಾಯಕ್’ ಚಿತ್ರ ಬಿಡುಗಡೆಯಾಗಿತ್ತು. ‘19(1)(ಎ)’ ಎಂಬ ಮಲಯಾಳಂ ಚಿತ್ರ ಹಾಗೂ ‘ತಿರುಚಿತ್ರಾಂಬಳಂ’ ಎಂಬ ತಮಿಳು ಚಿತ್ರದಲ್ಲಿ ಈಗಾಗಲೇ ತಮ್ಮ ಕೆಲಸ ಮುಗಿಸಿರುವ ನಿತ್ಯಾ, ಆ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.