ವಾಚಾಳಿ ನಿಶ್ವಿಕಾ; ರಾಮಾರ್ಜುನದಲ್ಲಿ ವಿಭಿನ್ನ ಪಾತ್ರ...

Nishwika
Published on

ಬೆಂಗಳೂರು: ನಿಶ್ವಿಕಾ ನಾಯ್ಡು ಚಿತ್ರರಂಗಕ್ಕೆ ಬಂದಿದ್ದು ಅನೀಶ್ ತೇಜೇಶ್ವರ್ ನಿರ್ವಣದ ‘ವಾಸು - ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೂಲಕ. ಇದೀಗ ಅದೇ ಅನೀಶ್ ನಿರ್ಮಾಣ ಮತ್ತು ನಿರ್ದೇಶನದ ‘ರಾಮಾರ್ಜುನ’ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಮೊದಲ ಬಾರಿ ಕಾನೂನು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿರುವ ನಿಶ್ವಿಕಾ, ‘ಕಾನೂನು ತುಂಬ ತಿಳಿದುಕೊಂಡಂತೆ ವರ್ತಿಸುವ ಪಾತ್ರ ನನ್ನದು. ಚಿತ್ರದಲ್ಲಿ ಪುಟಗಟ್ಟಲೆ ಡೈಲಾಗ್​ಗಳಿವೆ. ಇಡೀ ಚಿತ್ರದಲ್ಲಿ ತುಂಬ ಮಾತಾಡುವ ಪಾತ್ರ ಸಿಕ್ಕಿದೆ. ಇದುವರೆಗೂ ಮಾಡದ ಒಂದು ಪಾತ್ರವನ್ನು ಮಾಡುವುದಕ್ಕೆ ಅವಕಾಶ ನೀಡಿದ್ದಕ್ಕೆ ಅನೀಶ್​ಗೆ ಥ್ಯಾಂಕ್ಸ್’ ಎನ್ನುತ್ತಾರೆ.

‘ರಾಮಾರ್ಜುನ’ ಚಿತ್ರವನ್ನು ಕಳೆದ ವರ್ಷವೇ ಬಿಡುಗಡೆ ಮಾಡುವುದಕ್ಕೆ ಅನೀಶ್ ತಯಾರಿ ನಡೆಸಿದ್ದರು. ಆದರೆ, ಲಾಕ್​ಡೌನ್​ನಿಂದ ಅದು ತಡವಾಯಿತು. ಒಂದು ಹಂತದಲ್ಲಿ ಅವರು ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದರಂತೆ. ಒಮ್ಮೆ ಇಂಟರ್​ನೆಟ್ ಕೈಕೊಟ್ಟಾಗ, ರಕ್ಷಿತ್​ಗೆ ಫೋನ್ ಮಾಡಿ ಅವರ ಮನೆಯ ಇಂಟರ್​ನೆಟ್ ಬಳಸಿಕೊಳ್ಳುವುದಕ್ಕೆ ಅನುಮತಿ ಕೇಳಿದರಂತೆ. ಈ ಸಂದರ್ಭದಲ್ಲಿ ಸ್ವಲ್ಪ ಚಿತ್ರ ನೋಡಿ ಖುಷಿಯಾದ ರಕ್ಷಿತ್, ಯಾವುದೇ ಕಾರಣಕ್ಕೂ ಓಟಿಟಿಯಲ್ಲಿ ಬಿಡುಗಡೆ ಮಾಡಬೇಡ ಎಂದಿದ್ದಾರೆ. ಅಷ್ಟೇ ಅಲ್ಲ, ಅನೀಶ್ ಬೆನ್ನಿಗೆ ನಿಂತು, ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿಸುವುದಕ್ಕೆ ಮುಂದಾಗಿದ್ದಾರೆ.

‘ರಾಮಾರ್ಜುನ’ ಚಿತ್ರದಲ್ಲಿ ಅನೀಶ್ ಇನ್ಸೂರೆನ್ಸ್ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು, ಚಿತ್ರವನ್ನು ಬಹಳಷ್ಟು ಜನರಿಗೆ ತೋರಿಸಿದ್ದಾರಂತೆ. ಎಲ್ಲರೂ ಈ ಬಾರಿ ಗೆಲ್ಲುತ್ತೀಯ ಎಂದು ಹಾರೈಸಿರುವುದು ಅವರಲ್ಲಿ ವಿಶ್ವಾಸ ಮೂಡಿಸಿದೆ. ‘ಈ ಬಾರಿ ನಾನು ಗೆಲುವು ಕಾಣಲೇಬೇಕು. ಚಿತ್ರರಂಗದಲ್ಲಿ 12 ವರ್ಷ ಕಷ್ಟಪಟ್ಟಿದ್ದೇನೆ’ ಎನ್ನುತ್ತಾರೆ ಅನೀಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net