ಗುರು ಶಿಷ್ಯರ ಜತೆ ನಿಶ್ವಿಕಾ; ಶರಣ್ ಜತೆಗೆ ಮೊದಲ ಬಾರಿ ನಟನೆ..

Nishwika
Published on

ಬೆಂಗಳೂರು: ಲಾಕ್​ಡೌನ್ ಮುಗಿದ ನಂತರ ಹೀರೋಯಿನ್​ಗಳೆಲ್ಲ ನಾ ಮುಂದು, ತಾ ಮುಂದು ಎಂದು ಒಂದರಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರೆ, ನಿಶ್ವಿಕಾ ನಾಯ್ಡು ಮಾತ್ರ ಯಾವೊಂದು ಚಿತ್ರವನ್ನು ಹೊಸದಾಗಿ ಒಪ್ಪಿಕೊಂಡಿರಲಿಲ್ಲ. ‘ರಾಮಾರ್ಜುನ’ ಚಿತ್ರದ ಬಿಡುಗಡೆ ಮತ್ತು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅವರು, ಇದೀಗ ‘ಗುರು ಶಿಷ್ಯರು’ ಚಿತ್ರತಂಡಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಶರಣ್ ಅಭಿನಯದ ‘ಗುರು ಶಿಷ್ಯರು’ ಚಿತ್ರವು ಜನವರಿಯಲ್ಲೇ ಪ್ರಾರಂಭವಾಗಿತ್ತು. ಬೆಂಗಳೂರು, ಸಾಗರ ಮುಂತಾದ ಕಡೆ ಚಿತ್ರೀಕರಣ ಸಹ ನಡೆದಿತ್ತು. ಚಿತ್ರೀಕರಣ ಪ್ರಾರಂಭವಾದರೂ ನಾಯಕಿಯ ಆಯ್ಕೆ ಅಂತಿಮವಾಗಿರಲಿಲ್ಲ. ನಾಯಕಿ ಭಾಗದ ಚಿತ್ರೀಕರಣ ಸ್ವಲ್ಪ ತಡವಿರುವದರಿಂದ ಇನ್ನಷ್ಟೇ ಆಯ್ಕೆ ಮಾಡಬೇಕಿದೆ ಎಂದು ಹೇಳಿದ್ದರು. ಇದೀಗ ಚಿತ್ರತಂಡಕ್ಕೆ ನಿಶ್ವಿಕಾ ಸೇರ್ಪಡೆಯಾಗಿದ್ದಾರಂತೆ.

ಈ ವಿಷಯವಾಗಿ ನಿರ್ದೇಶಕ ಜಡೇಶ್ ಅವರನ್ನು ಕೇಳಿದರೆ, ಅವರು ಹೌದು ಎನ್ನುವುದಿಲ್ಲ. ಸುದ್ದಿ ಸುಳ್ಳು ಅಂತಲೂ ಹೇಳುವುದಿಲ್ಲ. ‘ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಬೇರೆ ರೀತಿ ರಿವೀಲ್ ಮಾಡುವ ಯೋಚನೆ ಇದೆ’ ಎಂದಷ್ಟೇ ಹೇಳುತ್ತಾರೆ. ಈ ಹಿಂದೆ, ‘ಜಂಟಲ್​ವ್ಯಾನ್’ ಚಿತ್ರದಲ್ಲಿ ನಿಶ್ವಿಕಾ ಅವರನ್ನು ನಿರ್ದೇಶಿಸಿದ್ದರು ಜಡೇಶ್. ಈಗ ಅವರಿಬ್ಬರೂ ‘ಗುರು ಶಿಷ್ಯರು’ ಚಿತ್ರದಲ್ಲಿ ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ‘ಗುರು ಶಿಷ್ಯರು’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದರೆ, ಸುಧಾಕರ್ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net