More

    ಸಪ್ತ ಸಾಗರಕ್ಕೆ ರಕ್ಷಿತ್ ಸ್ಲಿಮ್: ಮುಹೂರ್ತದ ದಿನವೇ ಚಿತ್ರದ ಬಿಡುಗಡೆ ದಿನಾಂಕ

    ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವೂ ಶುಕ್ರವಾರ ಬೆಳಗ್ಗೆ ಸದ್ದಿಲ್ಲದೆ ಪ್ರಾರಂಭವಾಗಿದೆ. ಮುಹೂರ್ತದ ದಿನವೇ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಿಸಲಾಗಿದೆ. ಇದೇ ವರ್ಷದ ಕೊನೆಯ ಶುಕ್ರವಾರ (ಡಿಸೆಂಬರ್ 31) ಚಿತ್ರ ಬಿಡುಗಡೆಯಾಗಲಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವನ್ನು ಹೇಮಂತ್ ರಾವ್ ಬರೆದು ನಿರ್ದೇಶನ ಮಾಡಿದರೆ, ಪರಂವಾ ಪಿಕ್ಚರ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಅದರಡಿ ಚಿತ್ರ ನಿರ್ವಿುಸುತ್ತಿದ್ದಾರೆ ರಕ್ಷಿತ್. ಇನ್ನು ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಈ ತಿಂಗಳ ಕೊನೆಯಿಂದ ಚಿತ್ರೀಕರಣ ಪ್ರಾರಂಭವಾಗಿ, ಜುಲೈ ಅಂತ್ಯದೊಳಗೆ ಚಿತ್ರೀಕರಣ ಮುಗಿಯಲಿದೆಯಂತೆ.

    ಎರಡು ಶೇಡ್​ಗಳಲ್ಲಿ ರಕ್ಷಿತ್: ಇದೊಂದು ಇಂಟೆನ್ಸ್ ಪ್ರೇಮಕಥೆಯಾಗಿದ್ದು, ಎರಡು ಕಾಲಘಟ್ಟದಲ್ಲಿ ನಡೆಯುತ್ತದಂತೆ. 2010ರಲ್ಲಿ ಪ್ರಾರಂಭವಾಗುವ ಕಥೆ, 2020ರಲ್ಲಿ ಮುಗಿಯಲಿದೆ. ಮನು ಎಂಬ ಯುವಕನ ಜೀವನದ 10 ವರ್ಷಗಳಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತದೆ. ಎರಡು ಕಾಲಘಟ್ಟವಾದ್ದರಿಂದ ರಕ್ಷಿತ್ 2 ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಹಂತವಾಗಿ ಅವರು 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಗಡ್ಡ ಕೂಡ ಬಿಟ್ಟಿದ್ದಾರೆ. ಆ ಭಾಗದ ಚಿತ್ರೀಕರಣದ ನಂತರ ಒಂದು ತಿಂಗಳ ಗ್ಯಾಪ್​ನಲ್ಲಿ ಅವರು 10 ಕೆಜಿ ತೂಕ ಇಳಿಸಿಕೊಳ್ಳುವುದರ ಜತೆಗೆ ಗೆಟಪ್ ಬದಲಾಯಿಸಲಿದ್ದಾರೆ.

    ಆಗಸ್ಟ್​ನಿಂದ ‘ಕಿರಿಕ್ ಪಾರ್ಟಿ 2’: ‘ಸಪ್ತ ಸಾಗರದಾಚೆ ಎಲ್ಲೋ’ ನಂತರ ‘ಕಿರಿಕ್ ಪಾರ್ಟಿ 2’ ಚಿತ್ರದಲ್ಲಿ ನಟಿಸಲಿದ್ದಾರಂತೆ ರಕ್ಷಿತ್. ‘‘ಕಿರಿಕ್ ಪಾರ್ಟಿ’ ತಂಡವೇ ಈ ಚಿತ್ರ ಮಾಡುತ್ತಿದೆ. ರಿಷಬ್ ನಿರ್ದೇಶನ ಮಾಡಲಿದ್ದಾರೆ. ಆ ಕಥೆಯ ಮುಂದುವರೆದ ಭಾಗ ಇದು. ನಾಯಕಿಯರು ಮಾತ್ರ ಬದಲಾಗಲಿದ್ದಾರೆ. ಮಿಕ್ಕಂತೆ ಅದೇ ಸ್ನೇಹಿತರ ಗುಂಪು. ಕಾಲೇಜ್ ಲೈಫ್ ಆದ ನಂತರ ಅವರೆಲ್ಲ ಏನು ಮಾಡುತ್ತಾರೆ ಎನ್ನುವುದು ಚಿತ್ರದ ಕಥೆ. ಐಡಿಯಾ ರೆಡಿ ಇದೆ. ಚಿತ್ರಕಥೆ ಬರೆಯಬೇಕು. ಇದಲ್ಲದೆ ‘ಪುಣ್ಯಕೋಟಿ’ ಸಹ ಬರೆಯುತ್ತಿದ್ದೇನೆ’ ಎನ್ನುತ್ತಾರೆ ರಕ್ಷಿತ್.

    ರಕ್ಷಿತ್ ಹೊಸ ಯೋಚನೆ/ಯೋಜನೆ: ರಕ್ಷಿತ್ ಅವರ ಪರಂವಾ ಸ್ಟುಡಿಯೋಸ್​ಗೆ ಐದರ ಹರೆಯ. ಈ ಸಂದರ್ಭದಲ್ಲಿ ಅದರಡಿ, ಮೂರು ಹೊಸ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಈ ಪೈಕಿ ಪರಂವಾ ಪಿಕ್ಚರ್ಸ್​ನಡಿ ತಮ್ಮ ಮುಂದಿನ ಚಿತ್ರಗಳನ್ನು ನಿರ್ವಿುಸಲಿದ್ದಾರಂತೆ. ಪರಂವಾ ಸ್ಪಾಟ್​ಲೈಟ್ ಸಂಸ್ಥೆಯು ಹೊಸಬರನ್ನು ಪೋಷಿಸುವುದಕ್ಕೆ ಮತ್ತು ಪ್ರಯೋಗಾತ್ಮಕ ಚಿತ್ರಗಳನ್ನು ರೂಪಿಸುವ ಉದ್ದೇಶದಿಂದ ಪ್ರಾರಂಭವಾದರೆ, ಪರಂವಾ ಮ್ಯೂಸಿಕ್​ನಡಿ ಅವರು ಜಾನಪದ ಹಾಡುಗಳಿಗೆ ಆಧುನಿಕ ಸ್ಪರ್ಶ ಕೊಟ್ಟು ಇನ್ನಷ್ಟು ಜನಪ್ರಿಯಗೊಳಿಸುವ ಯೋಚನೆುಲ್ಲಿದ್ದಾರೆ.

    ನಾನು ನನ್ನ ತಂಡ: ರಕ್ಷಿತ್ ಬರೀ ಕೆಲವರ ಜತೆಗೆ ಮಾತ್ರ ಚಿತ್ರ ಮಾಡುತ್ತಾರೆ, ಬೇರೆಯವರಿಗೆ ಅಷ್ಟು ಸುಲಭವಾಗಿ ಸಿಗುವುದಿಲ್ಲ ಎಂಬ ಮಾತಿದೆ. ಈ ಕುರಿತು ಮಾತನಾಡುವ ಅವರು, ‘ಮೂರ್ನಾಲ್ಕು ಚಿತ್ರಗಳ ಲೈನಪ್ ಇದೆ. ಯಾರಾದರೂ ಬಂದು, ಕಥೆ ಇಷ್ಟವಾದರೂ, ಈಗ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿ ಕೈಗೆತ್ತಿಕೊಳ್ಳಬೇಕು. ಅದಕ್ಕೆ ಐದು ವರ್ಷವಾದರೂ ಬೇಕಾಗುತ್ತದೆ. ಹೋಗಲಿ, ನಾನು ಇದೆಲ್ಲ ಮುಗಿಸಿ ಆ ಕಡೆ ಹೋಗೋಣ ಎಂದರೆ, ನನ್ನಲ್ಲೇ ನಾಲ್ಕು ಹೊಸ ಕಥೆಗಳು ಹುಟ್ಟಿಕೊಂಡಿರುತ್ತವೆ. ನನ್ನ ತಂಡದವರ ಬಳಿಯೂ ಇನ್ನೊಂದಿಷ್ಟು ಕಥೆಗಳು ಇರುತ್ತವೆ. ಹಾಗಾಗಿ ಬೇರೆಯವರಿಗೆ ಸಿನಿಮಾ ಮಾಡುವುದಕ್ಕೆ ಆಗುತ್ತಿಲ್ಲ. ಮೇಲಾಗಿ, ನಮ್ಮ ತಂಡಗಳಾದರೆ ಒಂದು ನಂಬಿಕೆ ಇರುತ್ತದೆ. ಹೊರಗಿನವರ ಚಿತ್ರವಾದರೆ, ಹೇಗಾಗುತ್ತದೋ ಗೊತ್ತಿಲ್ಲವಲ್ಲ’ ಎಂಬುದು ರಕ್ಷಿತ್ ಅಭಿಪ್ರಾಯ.

    ಪಾಸ್​​ವರ್ಡ್​ ಶೇರಿಂಗ್: ಮಹತ್ವದ ಕ್ರಮಕ್ಕೆ ಮುಂದಾದ ನೆಟ್​ಪ್ಲಿಕ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts